ಯು.ಬಿ.ಎನ್.ಡಿ., ಸೆ.5: ಆರೋಗ್ಯ ಮತ್ತು ಔಷಧ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಭಾರತ-ಸಿಂಗಾಪುರ ಸೆಮಿಕಂಡಕ್ಟರ್ ಇಕೋಸಿಸ್ಟಮ್ ಪಾಲುದಾರಿಕೆ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಸಿಂಗಾಪುರ ನಾಲ್ಕು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ನಡುವಿನ ನಿಯೋಗ ಮಟ್ಟದ ಮಾತುಕತೆಯ ನಂತರ ಇದನ್ನು ನಿರ್ಧರಿಸಲಾಯಿತು. ಸಿಂಗಾಪುರದಲ್ಲಿ ನಡೆದ ಮಾತುಕತೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಮತ್ತಷ್ಟು ವಿಸ್ತರಿಸಲು ಎರಡೂ ಕಡೆಗಳಿಂದ ಸಹಕಾರದ ಭರವಸೆ ವ್ಯಕ್ತವಾಯಿತು.
ಭಾರತದ ಆರ್ಥಿಕತೆಯಲ್ಲಿ ಸುಮಾರು 160 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಸಿಂಗಾಪುರ ಭಾರತದ ಪ್ರಮುಖ ಆರ್ಥಿಕ ಪಾಲುದಾರ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದಲ್ಲಿ ತ್ವರಿತ ಮತ್ತು ನಿರಂತರ ಬೆಳವಣಿಗೆಯು ಸಿಂಗಾಪುರದ ಘಟಕಗಳಿಗೆ ಅಪಾರ ಹೂಡಿಕೆ ಅವಕಾಶಗಳನ್ನು ತೆರೆದಿದೆ. ರಕ್ಷಣಾ ಮತ್ತು ಭದ್ರತೆ, ಕಡಲ ಡೊಮೇನ್ ಜಾಗೃತಿ, ಶಿಕ್ಷಣ, ಎಐ, ಫಿನ್‌ಟೆಕ್, ಹೊಸ ತಂತ್ರಜ್ಞಾನ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜ್ಞಾನ ಪಾಲುದಾರಿಕೆ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಹಕಾರವನ್ನು ಉಭಯ ಪ್ರಧಾನಿಗಳು ಪರಿಶೀಲಿಸಿದರು. ಉಭಯ ನಾಯಕರು ಆರ್ಥಿಕ ಮತ್ತು ಜನರ ನಡುವಿನ ಸಂಬಂಧವನ್ನು ಹೆಚ್ಚಿಸಲು ದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಕರೆ ನೀಡಿದರು. ಹಸಿರು ಕಾರಿಡಾರ್ ಯೋಜನೆಗಳ ವೇಗವರ್ಧನೆಗೆ ಇದೇ ಸಂದರ್ಭದಲ್ಲಿ ಕರೆ ನೀಡಿದರು. ಕಳೆದ ತಿಂಗಳು ಸಿಂಗಾಪುರದಲ್ಲಿ ನಡೆದ 2ನೇ ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ ಫಲಿತಾಂಶದ ಕುರಿತು ಉಭಯ ನಾಯಕರು ಚರ್ಚಿಸಿದರು. ಸಭೆಯಲ್ಲಿ, ಭಾರತ-ಆಸಿಯಾನ್ ಸಂಬಂಧಗಳು ಮತ್ತು ಇಂಡೋ-ಪೆಸಿಫಿಕ್‌ಗೆ ಭಾರತದ ದೃಷ್ಟಿ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ 3,50,000 ಜನರು ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಭದ್ರ ಬುನಾದಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಿಂಗಾಪುರದಲ್ಲಿ ಭಾರತದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ತೆರೆಯಲಾಗುವುದು ಎಂದು ಅವರು ಘೋಷಿಸಿದರು.