ಉಡುಪಿ, ಸೆ.5: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಡುಪಿ ಜಿಲ್ಲೆ
ಇದರ ಪ್ರಶಿಕ್ಷಣ ವರ್ಗವು ಉಡುಪಿಯ ಹಿರಿಯ ವಕೀಲರಾದ ಬಿ ನಾಗರಾಜ್ ರವರ ‘ಕೃಷ್ಣಾನುಗೃಹ’ ನಿವಾಸದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದಂತ ಬಿ ನಾಗರಾಜ್ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಪ್ರಾಂತ್ಯದ ಕಾರ್ಯಧ್ಯಕ್ಷ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ನ್ಯಾಯವಾದಿ ಅಮೃತಕಲಾ ಉಪಸ್ಥಿತರಿದ್ದರು. ಅಭ್ಯಾಸ ವರ್ಗವು ಮೂರು ಅವಧಿಯಲ್ಲಿ ನಡೆಯಿತು.
ಅಭ್ಯಾಸ ವರ್ಗದ ವಿಷಯಗಳಾದ ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕುರಿತು ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿರುವ ಅಮರ್ ಕೊರೆಯ, ಕಮರ್ಷಿಯಲ್ ಕೋರ್ಟ್ ಆಕ್ಟ್ ಕುರಿತು ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಂ ಎನ್ ಕುಮಾರ್ ಮತ್ತು ಸಂಘಟನಾತ್ಮಕ ವಿಷಯದ ಬಗ್ಗೆ ಮಂಗಳೂರು ವಕೀಲರಾದ ಜಗದೀಶ್ ಕೆಆರ್ ಇವರುಗಳು ಮಾಹಿತಿಯನ್ನು ನೀಡಿದರು. ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಧಿವ್ಯಕ್ತ ಪರಿಷತ್ತಿನ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ರೋಹಿತ್ ಗೌಡ ಮತ್ತು ಮಂಗಳೂರು ವಿಭಾಗದ ಸಂಚಾಲಕ ಚೇತನ್ ನಾಯಕ್ ಎಸ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಅಧಿವಕ್ತಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ ವಂದಿಸಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.