ಉಡುಪಿ, ಸೆ.4: ಸಾಂಪ್ರದಾಯಿಕ ಹಾಗೂ ಜನಪದೀಯ ಸೊಗಡಿನ ‘ಕಾವಿ ಕಲೆ’ಯ ವಿಭಿನ್ನವಾದ ಪ್ರಯೋಗಾತ್ಮಕ ಕಲಾ ಪ್ರದರ್ಶನವನ್ನು ಕಾವಿ ಆರ್ಟ್ ಪೌಂಡೇಶನ್ ಹಾಗೂ ಭಾವನಾ ಫೌಂಡೇಶನ್ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿದ್ದು, ವಾಸು ಏಜೆನ್ಸೀಸ್ ಬಳಿಯಿರುವ ಹತ್ತು ಮೂರು ಇಪ್ಪತ್ತೆಂಟು ಬಡಗುಪೇಟೆ ಗ್ಯಾಲರಿಯಲ್ಲಿ ಚಿತ್ರಕಲಾ ಮಂದಿರ ಕಲಾಶಾಲೆಯ ಉಪನ್ಯಾಸಕಿಯಾಗಿರುವ ವಿಜಯಲಕ್ಷ್ಮಿ ಎನ್. ಇವರಿಂದ ಉದ್ಘಾಟನೆಗೊಂಡಿತು. ಕರ್ನಾಟಕವು ಹಲವು ಕಲೆಗಳ ತವರೂರು, ಇಲ್ಲಿನ ಕರಾವಳಿ ಭಾಗದ ಅತ್ಯದ್ಭುತವಾದ ಈ ಕಲೆಯು ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಅತಿ ಪ್ರಾಚೀನ ಕಲೆಯಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಜನಾರ್ದನ ಹಾವಂಜೆಯವರ ಶ್ರಮ ಸಾರ್ಥಕವಾಗಲಿ ಎಂಬುದಾಗಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿಗಳಾದ ಆನಂದ ಕಾರ್ನಾಡ್ರವರು, ಕೊಂಕಣ ಕಲೆಗೆ ಬಹಳಷ್ಟು ಪ್ರಾಚೀನತೆ ಇದ್ದರೂ ಪ್ರಾಧಾನ್ಯತೆ ದೊರಕದಿರುವುದು ಬಹಳ ಖೇದಕರ ಸಂಗತಿ. ಬಹಳಷ್ಟು ಶೀಘ್ರದಲ್ಲಿ ಈ ಪಾರಂಪರಿಕ ಕಲೆಗೆ ಜಿ. ಐ. ಮಾನ್ಯತೆ ದೊರಕಲಿ, ಕಲಾವಿದರನ್ನು ಪೋಷಿಸುವ ಗುಣ ಹೆಚ್ಚಾಗಲಿ ಅಂತೆಯೇ ಕಾವಿ ಕಲೆಯನ್ನು ನವೀನ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಮತ್ತು ಅದನ್ನು ಉಳಿಸುವ ಸಲುವಾಗಿ ಕಾರ್ಯೋನ್ಮುಖರಾದ ಕಲಾವಿದರಿಗೆ ಅಭಿನಂದನೆಗಳು ಎಂಬುದಾಗಿ ಶ್ಲಾಘಿಸಿದರು. ಫೌಂಡೇಶನ್ನ ನಿರ್ದೇಶಕರಾಗಿರುವ ಹಾವಂಜೆ ಮಂಜುನಾಥ ರಾವ್ರವರು ಕಾವಿ ಕಲೆಯನ್ನು ಪ್ರಚುರಪಡಿಸುವುದಕ್ಕಾಗಿ ಕಾವಿ ಆರ್ಟ್ ಫೌಂಡೇಶನ್ ಸಹಕಾರ ಸಂಘವನ್ನು ಕಟ್ಟಲಾಗಿದೆಯಲ್ಲದೇ ಮುಂದಿನ ದಿನಗಳಲ್ಲಿ ಇದರ ಜೊತೆಗೆ ಇನ್ನಿತರ ಪಾರಂಪರಿಕ ಕಲೆಗಳ ಜಾಗೃತಿ ಹಾಗೂ ಉಳಿವಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಉಡುಪಿ, ಉತ್ತರ ಕನ್ನಡ ಹಾಗೂ ಮಂಗಳೂರು ಭಾಗದ 18 ಕಲಾವಿದರು ಭಾಗವಹಿಸಿರುವ ಈ ಕಲಾ ಪ್ರದರ್ಶನದ ಸಂಯೋಜನೆಯನ್ನು ಕಳೆದ 20 ವರ್ಷಗಳಿಂದ ಕಾವಿ ಕಲೆಯ ಬಗೆಗೆ ನಿರಂತರ ಪ್ರಯೋಗಗಳನ್ನು ನಡೆಸುತ್ತಿರುವ ಕಲಾವಿದರಾದ ಡಾ. ಜನಾರ್ದನ ಹಾವಂಜೆಯವರು ಮಾಡಿರುವರಲ್ಲದೇ ಇದೊಂದು ಕೇವಲ ಕಲಾ ಪ್ರದರ್ಶನವಾಗಿರದೇ ಕಾವಿ ಕಲೆಯ ದೀರ್ಘಾವಧಿಯನ್ನು ಮತ್ತು ಅದರ ಪ್ರಾಸಂಗಿಕತೆಯನ್ನು ಇಂದಿನ ಜಗತ್ತಿನಲ್ಲಿ ಖಚಿತಗೊಳಿಸಿಕೊಳ್ಳುವ ಒಂದು ಸಂಚಲನವಾಗಿದೆ. ಸಾಂಪ್ರದಾಯಿಕ ಕಾವಿ ಕಲೆಯ ವಿನ್ಯಾಸಗಳನ್ನು ಜವಳಿ, ಟೈಲ್ಸ್, ಗಾಜು, ಕಾಗದ, ಪ್ರಿಂಟ್ ಮೇಕಿಂಗ್, ಸ್ಕ್ರೀನ್ ಪ್ರಿಂಟ್, ಸ್ಟಿಕ್ಕರ್ ಕಟ್ಟಿಂಗ್ ಮೊದಲಾದ ನವೀನ ಮಾಧ್ಯಮಗಳಲ್ಲಿ ಪರಿವರ್ತಿಸುವ ಮೂಲಕ ಸುಲಭವಾಗಿ ಜನರಿಗೆ ಸಮೀಪಿಸಬಹುದಾದ ಸಾಧ್ಯತೆಯೊಂದಿಗೆ ನಡೆಸುತ್ತಿರುವ ಪ್ರಯೋಗವಾಗಿದೆ. ಈ ಕಲಾಪ್ರದರ್ಶನವು ಕಾವಿ ಕಲೆಯ ಕಲಾ ಮಾಧ್ಯಮಕ್ಕೆ ಒಂದು ನವೀನ ಮಾರ್ಗವನ್ನು ತೆರೆದು ಅದನ್ನು ಇಂದಿನ ಕಾಲಕ್ಕೆ ತಂದುಕೊಳ್ಳಲು ಮತ್ತು ಸಮಕಾಲೀನ ಮಾಧ್ಯಮಗಳಲ್ಲಿ ಮರು ಆವಿಷ್ಕರಿಸುವ ಸಾಮೂಹಿಕ ಪ್ರಯತ್ನವಾಗಿದೆ. ಈ ಪ್ರದರ್ಶನವು ಕಾವಿ ಕಲೆಯನ್ನು ಮಾರುಕಟ್ಟೆಗೆ ತರುವ ಪ್ರಯತ್ನವೂ ಆಗಿದೆಯಲ್ಲದೇ ಇದರ ವೈವಿಧ್ಯಮಯ ಮತ್ತು ಸೌಂದರ್ಯಯುತ ಆಕರ್ಷಣೆಯನ್ನು ಎತ್ತಿ ಹಿಡಿಯುವಂತೆ ಮಾಡುವುದರ ಉದ್ದೇಶವಿದೆ. ಈ ಸಾಂಪ್ರದಾಯಿಕ ವಿನ್ಯಾಸಗಳನ್ನು ದಿನನಿತ್ಯದ ಉಪಯೋಗದ ವಸ್ತುಗಳಲ್ಲಿ ಹೇಗೆ ಬಳಸಬಹುದು ಎಂಬುವುದರ ಪ್ರದರ್ಶನದ ಮೂಲಕ ಗೋಡೆಯ ವಿನ್ಯಾಸಗಳು ಸಮಕಾಲೀನ ಸಂಸ್ಕೃತಿಯಲ್ಲಿಯೂ ಪ್ರಸಿದ್ಧಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈ ದೃಷ್ಠಿಕೋನವು ಕಾವಿ ಕಲೆಯಂತಹ ಅಳಿವಿನಂಚಿನಲ್ಲಿರುವ ಕಲಾ ಪ್ರಕಾರದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದಷ್ಟೇ ಅಲ್ಲದೇ ಅದರ ಮೆಚ್ಚುಗೆಯ ಹೊಸ ಮಾರ್ಗಗಳನ್ನು ತೆರೆದಿಡುವ ಪ್ರಾಯೋಗಿಕ ಪ್ರಯತ್ನವಾಗಿದೆ ಎಂಬುದಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾದಲ್ಲಿ ಕಾವಿ ಕಲೆಯ ಅಧೀಕೃತ ಮಾರಾಟವನ್ನು ಬಿಡುಗಡೆ ಮಾಡಲಾಯಿತಲ್ಲದೇ ಆಕರ್ಷಕ ದರದಲ್ಲಿ ದೇಶೀಯ ಕಾವಿ ಕಲೆಯ ಮಾರುಕಟ್ಟೆಯನ್ನೂ ತೆರೆಯಲಾಯಿತು. ಕಲಾ ಪ್ರದರ್ಶನದಲ್ಲಿ ಶ್ರೀನಿವಾಸ ಆಚಾರ್, ರಮೇಶ್ ಅಂಬಾಡಿ, ಸಿರ್ಸಿಯ ರಾಜೇಶ್ ಶಿರ್ಸೀಕರ್, ವರ್ಷಾ ಎ.ಜೆ., ಆಶ್ಲೇಷ್ ಭಟ್, ವಿಕ್ರಮ್ ಸುವರ್ಣ, ನಯನಾ ಆಚಾರ್ಯ, ಕೀರ್ತಿ ಕುಮಾರ್, ಪುರಂದರ್ ಮಲ್ಪೆ, ಸೌಮ್ಯಾ ಆಚಾರ್ಯ, ರಾಘವೇಂದ್ರ ಕಲ್ಕೂರ, ಮಂಗಳೂರಿನ ಪುಷ್ಪಾಂಜಲಿ ರಾವ್, ಪುರಂದರ ಆಚಾರ್ಯ, ಬೇಬಿ ಎಂ. ರಾವ್, ಮಂಜುನಾಥ ರಾವ್, ಅಕ್ಷತಾ ವಿಶು ರಾವ್, ಸಂತೋಷ್ ಪೈ ಹಾಗೂ ಜನಾರ್ದನ ಹಾವಂಜೆಯವರುಗಳ ಗಣೇಶ, ಸರಸ್ವತಿ, ಟ್ರೀ ಆಫ್ ಲೈಫ್, ಶ್ರೀ ರಾಮ, ಕೃಷ್ಣ, ಕೊರಗಜ್ಜ, ಮಂಡಲ ವಿನ್ಯಾಸಗಳು ಮುಂತಾಗಿ ಸುಮಾರು 30 ಕಲಾಕೃತಿಗಳು ಪ್ರದರ್ಶನದಲ್ಲಿದ್ದು ಪ್ರದರ್ಶನವು 8 ನೇ ಸೆಪ್ಟಂಬರ್ ತನಕ ಆಪರಾಹ್ನ 3ರಿಂದ 7ರತನಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ.