ನವದೆಹಲಿ, ಆ.31: ಗುಜರಾತಿನಲ್ಲಿ ಭಾರೀ ಮಳೆಗೆ ಕಾರಣವಾಗಿರುವ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಚಂಡಮಾರುತ ರೂಪ ಪಡೆದು ಮುಂದಿನ 24 ಗಂಟೆಗಳಲ್ಲಿ ಅರಬ್ಬಿ ಸಮುದ್ರದ ಪಶ್ಚಿಮಾಭಿಮುಖವಾಗಿ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಗುಜರಾತ್‌ನ ಕಚ್ಛ್ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಏತನ್ಮಧ್ಯೆ, ಒಡಿಶಾ, ಛತ್ತೀಸ್‌ಗಢ, ಕರಾವಳಿ ಆಂಧ್ರಪ್ರದೇಶ, ಮತ್ತು ಕರಾವಳಿ ಕರ್ನಾಟಕದ ಹಲವೆಡೆ ಶನಿವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 7 ದಿನಗಳಲ್ಲಿ ಮಧ್ಯ ಭಾರತ, ಕೇರಳ, ಪುದುಚೇರಿಯ ಮಾಹೆ ಜಿಲ್ಲೆ, ಕರಾವಳಿ ಕರ್ನಾಟಕ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ. ಮುಂದಿನ 7 ದಿನಗಳಲ್ಲಿ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಒಡಿಶಾ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪೂರ್ವ ರಾಜಸ್ಥಾನಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.