ಮಂಗಳೂರು, ಆ.29: ಮೇಜರ್ ಧ್ಯಾನ್ ಚಂದ್ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು ಅವರ ಸಾಧನೆ ಇತರರಿಗೂ ಮಾದರಿ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಕೇಶವಮೂರ್ತಿ ಟಿ ಹೇಳಿದರು. ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಐ.ಕ್ಯೂ.ಎ.ಸಿಯ ವತಿಯಿಂದ ಗುರುವಾರ ರಾಷ್ಟೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೇಜರ್ ಧ್ಯಾನ್ ಚಂದ್ ನಂತಹ ಶ್ರೇಷ್ಠ ಹಾಕಿ ಪಟುವಿಗೆ ಚಾಂದ್ ಬಿರುದು ಬಂದ ಹಿನ್ನಲೆ, ಅವರ ಕ್ರೀಡಾ ಸಾಧನೆಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ರಾಷ್ಟೀಯ ಕ್ರೀಡಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ಸುಧಾಕರನ್ ಟಿ., ಸಂಚಾಲಕರಾದ ದೇವಿಪ್ರಸಾದ್, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಘುಪತಿ ಉಪಸ್ಥಿತರಿದ್ದರು. ಮುಖ್ಯಸ್ಥರು ಹಾಗೂ ಸಂಯೋಜಕರಾದ ಶುಭ ಕೆ ಹೆಚ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವ ವಂದಿಸಿದರು.