ಉಡುಪಿ, ಆ.20: ಶತಮಾನಗಳ ಹಿಂದೆ ಸಮಪಾಲು-ಸಮಬಾಳ್ವೆಗಾಗಿ ಧ್ವನಿ ಎತ್ತಿದ ನಾರಾಯಣಗುರು. ಯಾವುದೇ ರಕ್ತ ಕ್ರಾಂತಿಗಳಿಲ್ಲದೆ ತಮ್ಮ ಮಾತು ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿನ ಮೇಳು-ಕೀಳು ಎಂಬ ಅಂಧಕಾರವನ್ನು ಹೋಗಲಾಡಿಸಿ, ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾಗಿ ಬಡವರ, ಶ್ರೀಮಂತರ ಸಂಘರ್ಷದ ವ್ಯವಸ್ಥೆಯಿಂದಾಗಿ ಸಮಾಜವು ಗೊಂದಲದ ಗೂಡಾಗಿತ್ತು ಎಂಬುದನ್ನು ಇತಿಹಾಸ ತಿಳಿಸಿಕೊಡುತ್ತದೆ. ಜಾತಿ ಪದ್ದತಿ, ಅಸ್ಪçಶ್ಯತೆ, ಜೀತ ಪದ್ದತಿ ಹಾಗೂ ಮಹಿಳಾ ದೌರ್ಜನ್ಯ ಮುಂತಾದ ಮೂಢನಂಬಿಕೆ ನಿವಾರಣೆಗಾಗಿ ಶ್ರಮಿಸಿದ ನಾರಾಯಣ ಗುರುಗಳ ಜೀವನ ಹಾಗೂ ಹೋರಾಟ ಸರ್ವರಿಗೂ ಆದರ್ಶವಾಗಿದೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಧ್ಯೇಯವಾಕ್ಯವನ್ನು ಹೊಂದಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಸಮಾನತೆಯ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವುದರೊಂದಿಗೆ ಮಾನವರೆಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ಸಾರಿದರು ಎಂದ ಅವರು ಹಿಂದುಳಿದ ವರ್ಗಗಳ ಏಳಿಗೆಯಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು. ನಾರಾಯಣ ಗುರುಗಳ ಆಚಾರ-ವಿಚಾರ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಅವರ ಆದರ್ಶ-ತತ್ವಗಳನ್ನು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಆಳವಡಿಸಿಕೊಳ್ಳವುದರ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದ ಅವರು, ವಿಧಾನಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ನಿಮಾರ್ಣಕ್ಕಾಗಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ಉಪನ್ಯಾಸ ನೀಡಿ ಮಾತನಾಡುತ್ತಾ, ತಳ ಸಮುದಾಯವನ್ನು ಒಗ್ಗೂಟಿಸುವ ಉದ್ದೇಶದಿಂದ ಧಾರ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿ ಸಮುದಾಯಕ್ಕೆ ಧೈರ್ಯ ತುಂಬಿದ ನಾರಾಯಣ ಗುರುಗಳು, ನಂತರದ ದಿನಗಳಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿಯಾದರು ಎಂದರು. ಪ್ರತಿಯೊಂದು ದೇವಸ್ಥಾನಗಳು ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರಗಳಾಗಿ ಬದಲಾಗಬೇಕು ಎಂಬ ಪರಿಕಲ್ಪನೆ ಹೊಂದಿದ್ದ ಅವರು ದೇವಸ್ಥಾನಗಳನ್ನು ಸಾಮಾಜಿಕ ಕ್ರಾಂತಿಯ ಒಂದು ಮಾರ್ಗವಾಗಿ ಉಪಯೋಗಿಸುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ತಳ ಸಮುದಾಯದ ಮಕ್ಕಳಿಗೆ ಪ್ರವೇಶ ನೀಡುವಂತೆ ಅನೇಕ ಚಳುವಳಿಗಳನ್ನು ಮಾಡುವ ಮೂಲಕ ತಳಸಮುದಾಯದ ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುವಲ್ಲಿ ಶ್ರಮಿಸಿದರು ಎಂದರು.
ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ಪ್ರಯುಕ್ತ ಅಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಲ್ಪೆ ಸೆಂಟ್ರಲ್ ವಾರ್ಡ್ ನಗರಸಭಾ ಸದಸ್ಯೆ ಎಡ್ಲೀನ್ ಕರ್ಕಡ, ತಹಶೀಲ್ದಾರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ ಬಂಗೇರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಎ. ಸುವರ್ಣ, ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸಂಧ್ಯಾ, ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ವಂದಿಸಿದರು. ತೇಜಸ್ ನಿರೂಪಿಸಿದರು.