ಬೆಂಗಳೂರು, ಆ.15: ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗಬಾರದು, ಇದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ದೇಶಭಕ್ತಿ ಎನ್ನುವುದು ನನ್ನ ಪಾಲಿಗೆ ಕೇವಲ ರಾಜಕೀಯ ಬೂಟಾಟಿಕೆಯ ಘೋಷಣೆ ಅಲ್ಲ. ಅದು ನಾಡಿನ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸಾಮರಸ್ಯದ ರಕ್ಷಣೆಯ ಹೊಣೆಗಾರಿಕೆಯ ಸಂಕಲ್ಪ.
ಈ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನೆರವೇರಿಸಿ ರಾಜ್ಯದ ಜನರ ಶ್ರೇಯೋಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಹಣಕಾಸಿನ ನೆರವು ಒದಗಿಸುವ ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯ ಮಾದರಿಯ ಕಲ್ಯಾಣ ಯೋಜನೆಗಳಾಗಿವೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಲಿಂಗ ಸಮಾನತೆಯತ್ತ ದೃಢ ಹೆಜ್ಜೆಯನ್ನು ಇರಿಸಿದೆ. ದುಡಿಮೆ ಮಾಡುತ್ತಿರುವ ಮಹಿಳೆಯರಿಗೂ ಅವರ ಖರ್ಚಿನ ದೊಡ್ಡ ಮೊತ್ತವನ್ನು ಉಳಿಸಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ.
ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ನಾವು 36 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಈ ವರ್ಷ ಈ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದ್ದೇವೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷ ಅನಾವೃಷ್ಟಿಯಿಂದಾಗಿ ನಮ್ಮ ರೈತರು ಸಂಕಷ್ಟ ಎದುರಿಸಬೇಕಾಯಿತು. ಕೇಂದ್ರ ಸರ್ಕಾರ ನೆರವು ನೀಡದಿದ್ದರೂ, ರೈತರ ನೆರವಿಗೆ ನಾವು ಕೈಜೋಡಿಸಿದ್ದೇವೆ. ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ ಒಟ್ಟಾರೆಯಾಗಿ 3454.22 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ. ಪ್ರಸ್ತುತ ಅತಿ ಮಳೆಯಿಂದಾಗಿ ತೊಂದರೆಗೊಳಗಾದ ಜನತೆಯ ನೆರವಿಗೆ ಸರ್ಕಾರ ಧಾವಿಸಿದೆ. ಅತಿವೃಷ್ಟಿಯಿಂದ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 1 ಲಕ್ಷ 20 ಸಾವಿರ ರೂಪಾಯಿ ಪರಿಹಾರ ಒದಗಿಸುವುದರೊಂದಿಗೆ ಮನೆಯನ್ನು ನಿರ್ಮಿಸಿ ಕೊಡಲು ನಾವು ನಿರ್ಧರಿಸಿದ್ದೇವೆ.
ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಚೇತೋಹಾರಿಯಾಗಿದ್ದರೆ, ಆರ್ಥಿಕ ಅಭಿವೃದ್ಧಿಯೆಡೆಗಿನ ನಮ್ಮ ಕಾರ್ಯಕ್ರಮಗಳು, ಪ್ರಯತ್ನಗಳು ಸ್ಥಿರತೆ ತರುವ ಸಾಧನಗಳಾಗಿವೆ. ಸರ್ವಜನ ಕಲ್ಯಾಣವೇ ಪ್ರಜಾಪ್ರಭುತ್ವದ ಅಂತಿಮ ಗುರಿ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜತನದಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.