ಉಡುಪಿ, ಆ.14: ಗ್ರಂಥಪಾಲಕರ ದಿನಾಚರಣೆ-2024 ರ ಅಂಗವಾಗಿ ನಗರದ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ನಡೆದ ಪುಸ್ತಕ ಪ್ರದರ್ಶನ ಹಾಗೂ ವಿವಿಧ ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸಾಹಿತಿ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಡಾ. ನಿಕೇತನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪುಸಕ್ತ ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳವುದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಪುಸಕ್ತಗಳು ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಮೂಲಕ ಉತ್ತಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಗ್ರಂಥಾಲಯದಲ್ಲಿ ನಡೆಸುವ ಓದುವ ಸ್ಫರ್ಧೆಗಳು ಓದುವ ಸದಾಭಿರುಚಿಯನ್ನು ಬೆಳೆಸುಕೊಳ್ಳುವಂತೆ ಮಾಡಿ ಇಂದಿನ ಯುವ ಪೀಳಿಗೆಯು ಪುಸಕ್ತಗಳ ಕಡೆಗೆ ಆಕರ್ಷಿಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಇರುವ ಪುಸ್ತಕಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಉಡುಪಿ ನಗರ ಕೇಂದ್ರ ಗ್ರಂಥಾಲಯ ಅಜ್ಜರಕಾಡು ಮುಖ್ಯ ಶಾಖೆ ಮತ್ತು ಸಮುದಾಯ ಮಕ್ಕಳ ಕೇಂದ್ರದಿಂದ ಶಾಲಾ ಮಕ್ಕಳಿಗೆ ಆಯೋಜಿಸಿದ ವಿವಿಧ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಾಲಯ ವಿವಿಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಪಟ್ಟಿಯನ್ನು ಸಮುದಾಯ ಮಕ್ಕಳ ಕೇಂದ್ರದ ಮೇಲ್ವಿಚಾರಕಿ ಆಶಾಲತಾ ವಾಚಿಸಿದರು. ಗ್ರಂಥಾಲಯ ಸಹಾಯಕಿ ಸುನೀತ ಬಿ. ಎಸ್ ನಿರೂಪಿಸಿ ವಂದಿಸಿದರು.