ಉಡುಪಿ, ಆ.8: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಉಡುಪಿ ಚೇತನ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಇವರ ಸಹಯೋಗದಲ್ಲಿ ಅತ್ರಾಡಿಯ ಅಂಗನವಾಡಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಉಡುಪಿ ಚೇತನ ಇದರ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್ ಮಾತನಾಡಿ, ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಪ್ರತೀ ವರ್ಷ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಮಗು ಹುಟ್ಟಿದ ತಕ್ಷಣ ಎದೆಹಾಲು ಉಣಿಸುವುದನ್ನು ಪ್ರಾರಂಭಿಸಿ ಎರಡು ವರ್ಷಗಳವರೆಗೆ ಮುಂದುವರೆಸಬೇಕು. ಹುಟ್ಟಿದ ಮಗುವಿಗೆ ಮೊದಲ 6 ತಿಂಗಳು ಎದೆಹಾಲು ಮಾತ್ರ ನೀಡಬೇಕು. ಎದೆಹಾಲು ಕುಡಿದ ಮಕ್ಕಳಲ್ಲಿ ಸೋಂಕು ರೋಗಗಳು ಹೆಚ್ಚಾಗಿ ಕಾಣಿಸುವುದಿಲ್ಲ ಎಂದ ಅವರು, ಡೆಂಗ್ಯೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಮಾತನಾಡಿ, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅವಶ್ಯಕ. ಮೊದಲ ಮೂರು ದಿನ ಬರುವ ಕೊಲಸ್ಟ್ರೋಮ್ ಹಾಲು ಮಗುವಿಗೆ ಲಸಿಕೆ ಇದ್ದಂತೆ. ಇದರಲ್ಲಿ ಪೌಷ್ಠಿಕಾಂಶ ಉತ್ಕೃಷ್ಠವಾಗಿದ್ದು, ಮಕ್ಕಳ ಬೆಳವಣಿಗೆ, ಬುದ್ದಿಮಟ್ಟ ಚುರುಕುಗೊಳಿಸಿ ಅತಿಸಾರ, ಅಪೌಷ್ಠಿಕತೆ, ನಿಮೋನಿಯಾ ತಡೆಗಟ್ಟಲು ಸಹಾಯಕ ಎಂದರು. ಲಯನ್ಸ್ ಕ್ಲಬ್ ಉಡುಪಿ ಚೇತನ ಇದರ ಕಾರ್ಯದರ್ಶಿ ಅಭಿಜಿತ್, ಖಜಾಂಚಿ ಮನೋಜ್ ಶೆಟ್ಟಿ, ಅತ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ರೂಪಾಶೆಟ್ಟಿ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಶೋಭಾಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಯಂದಿರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮಂಗಳ ಸ್ವಾಗತಿಸಿ ನಿರೂಪಿಸಿದರು. ಕಾಂತಿ ವಂದಿಸಿದರು.