ಉಡುಪಿ, ಆ.5: ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್ಲ್ ಕಾರ್ಯಕ್ರಮ ರವಿವಾರ ಸಂಜೆ ಸುಮನಸಾ ಕಾರ್ಯಾಲಯದಲ್ಲಿ ನಡೆಯಿತು. ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಮತ್ತು ಶಿಲ್ಪ ಚಂದ್ರಕಾಂತ್ ದಂಪತಿಗಳು ಸುರೇಖ ವಿನಯ್ ಅವರು ತಯಾರಿಸಿದ ಗೆಂಡದಡ್ಡೆಯ ಸಿಹಿಯನ್ನು ಹಂಚಿಕೊಳ್ಳುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸುಮತಿಯಮ್ಮನವರು ಆಟಿಯ ವೈಶಿಷ್ಟ್ಯ, ಆಟಿ ಅಮಾವಾಸ್ಯೆಯ ಕಷಾಯದ ವಿಶೇಷತೆಯನ್ನು ಸವಿವರವಾಗಿ ತಿಳಿಸಿದರು. ಮಾತೆಯರು ಆ ಕಾಲದ ಕಷ್ಟದ ದಿನಗಳನ್ನು ಇಂದಿನ ಪೀಳಿಗೆ ತಿಳಿಸುತ್ತಾ ಮಕ್ಕಳಿಗೆ ಪೊಕ್ಕಾಟ, ಜುಬಿಲಿ, ಚನ್ನೆಮಣೆ ಆಟವನ್ನು ಹೇಳಿಕೊಟ್ಟರು. ತಾವೇ ತಯಾರಿಸಿದ ಅಂದಿನ ಕಾಲದ 33 ಬಗೆಯ ತಿನಿಸುಗಳ ಪರಿಚಯದ ಜೊತೆಗೆ ಅದರಲ್ಲಿ ಅಡಗಿರುವ ಆರೋಗ್ಯ ಮಾಹಿತಿಯನ್ನು ನೀಡಿದರು.
ಸುಮನಸದ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಮಾತನಾಡುತ್ತಾ, ಪ್ರತಿ ವರ್ಷ ನೀವೇ ತಿಂಡಿತಿನಸುಗಳನ್ನು ತಯಾರಿಸಿ ಕಾರ್ಯಕ್ರಮ ಆಯೋಜಿಸುವ ನಿಮಗೆ ಕೃತಜ್ಞತೆಗಳು. ಮಕ್ಕಳನ್ನು ಮೊಬೈಲ್ ಗುಂಗಿನಿಂದ ದೂರವಿರಿಸಲು ಇಂತಹ ಒಳಾಂಗಣ ಆಟಗಳು ಪೂರಕ ಎಂಬ ಸಂದೇಶ ನೀಡಿದರು. ಸುಮನಸಾ ಸಂಚಾಲಕರಾದ ಭಾಸ್ಕರ್ ಪಾಲನ್ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾದಾಯಿನಿ, ಸಂಧ್ಯಾ ಪ್ರಕಾಶ್, ಗೀತಾ ಹರೀಶ್ ಇವರ ಪಾಡ್ದನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿಜಯ ಭಾಸ್ಕರ್ ಸ್ವಾಗತಿಸಿ, ಪ್ರಿಯಾ ಪ್ರವೀಣ್ ವಂದಿಸಿದರು. ಶೋಭಾ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.