ಕ್ಯಾಂಡಿ, ಜು.31: ಶ್ರೀಲಂಕಾ ವಿರುದ್ಧ ಇಲ್ಲಿಯ ಕ್ಯಾಂಡಿ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ರೋಚನ ಗೆಲುವನ್ನು ಸಾಧಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಮೊದಲ ಎರಡು ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದುಕೊಂಡ ಭಾರತ ಪಲ್ಲೆಕೆಲೆಯಲ್ಲಿ ಮೂರನೇ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಬ್ಯಾಟಿಂಗ್ ವೈಫಲ್ಯವನ್ನು ಎದುರಿಸಿತು. ಯಶಸ್ವಿ ಜೈಸ್ವಾಲ್ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದರೆ, ಸಂಜು ಸ್ಯಾಮ್ಸನ್ 0, ರಿಂಕು ಸಿಂಗ್ 1, ನಾಯಕ ಸೂರ್ಯಕುಮಾರ್ 8, ಶಿವಂ ದುಬೆ 13 ರನ್ ಗಳಿಸಿದರು. ಸ್ಪಿನ್ನರ್ ರಿಯಾನ್ ಪರಾಗ್ ತಂಡವನ್ನು ಆಧರಿಸುವ ಮೂಲಕ ತಾನು ಬ್ಯಾಟಿಂಗ್ ನಲ್ಲೂ ಸೈ ಎನಿಸಿಕೊಂಡರು. 18 ಎಸೆತಗಳಲ್ಲಿ 2 ಬಾನೆತ್ತರ ಸಿಕ್ಸರ್ ಮೂಲಕ 26 ರನ್ ಕರೆ ಹಾಕಿ ತಂಡಕ್ಕೆ ಗೌರವಯುತ ಸ್ಕೋರ್ ಆಗಲು ಸಹಕರಿಸಿದರು. ವಾಷಿಂಗ್ಟನ್ ಸುಂದರ್ ಕೂಡ 25 ರನ್ ಗಳಿಸಿ ಪರಾಗ್ ಗೆ ಸಾಥ್ ನೀಡಿದರು.ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಟ್ರ್ಯಾಕ್‌ನಲ್ಲಿ 20 ಓವರ್ ಗಳಲ್ಲಿ ಭಾರತ 9 ವಿಕೆಟ್‌ಗೆ 137 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭವನ್ನು ಕಂಡುಕೊಳ್ಳುವ ಮೂಲಕ ಗೆಲುವಿನತ್ತ ಮುನ್ನುಗ್ಗಿತು. ಮೊದಲ ವಿಕೆಟ್ ಗೆ 58 ರನ್ ಗಳ ಜತೆಯಾಟ ನೀಡಿದ ನಿಸಂಕ ಮತ್ತು ಮೆಂಡಿಸ್ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಪಿನ್ನರ್ ರವಿ ಬಿಷ್ನೋಯಿ ಯಶಸ್ವಿಯಾದರು. ರೋಚಕ ಹಂತ ತಲುಪಿದ ಪಂದ್ಯದ ಕೊನೆಯ ಎರಡು ಓವರ್ ಗಳಲ್ಲಿ ಪಂದ್ಯದ ಗತಿಯೇ ಬದಲಾಯಿತು. 19ನೇ ಓವರ್ ಎಸೆಯಲು ಬಂದಿದ್ದು ರಿಂಕು ಸಿಂಗ್. ಇಲ್ಲಿಯವ್ರೆಗೆ ಬಾಲ್ ಮುಟ್ಟದ ರಿಂಕು ಸಿಂಗ್ ಕೇವಲ 3 ರನ್ ನೀಡುವ ಮೂಲಕ ಒನ್ ಡೌನ್ ಆಗಿ ಬಂದು ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಕುಸಾಲ್ ಪಿರೆರಾಗೆ ಪೆವಿಲಿಯನ್ ದಾರಿ ತೋರಿಸಿದರು. ಇದೇ ಓವರ್ ನಲ್ಲಿ ರಿಂಕು ಸಿಂಗ್ ಮತ್ತೊಂದು ವಿಕೆಟ್ ಪಡೆದರು.
ಕೊನೆಯ ಓವರ್ ನಲ್ಲಿ ಶ್ರೀಲಂಕಾಗೆ ಗೆಲ್ಲಲು ಕೇವಲ 6 ರನ್ ಬೇಕಿತ್ತು, ಕೈಯಲ್ಲಿದ್ದದು 4 ವಿಕೆಟ್. ಆಗ ಕೊನೆಯ ಓವರ್ ಎಸೆಯಲು ಬಂದಿದ್ದು ನಾಯಕ ಸೂರ್ಯಕುಮಾರ್ ಯಾದವ್. ತನ್ನ ಚೊಚ್ಚಲ ಓವರ್ ನಲ್ಲೇ 2 ವಿಕೆಟ್ ಪಡೆದ ಸೂರ್ಯಕುಮಾರ್ ಪಂದ್ಯವನ್ನು ಟೈ ಮಾಡಲು ಯಶಸ್ವಿಯಾದರು. ಅಂತಿಮವಾಗಿ ಶ್ರೀಲಂಕಾ 8 ವಿಕೆಟ್‌ಗೆ 137 ರನ್‌ಗಳಿಗೆ ಸೀಮಿತವಾಯಿತು. ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಕೇವಲ 2 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವಿನ ದಡ ಸೇರಿಸಿದರು. ವಾಷಿಂಗ್ಟನ್ ಸುಂದರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರೆ, ಸೂರ್ಯಕುಮಾರ್ ಯಾದವ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡು ತಂಡಗಳು ಈಗ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗಾಗಿ ಕೊಲಂಬೊಗೆ ತೆರಳಲಿವೆ. ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.