ವಯನಾಡ್, ಜು.31: ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 143ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 186 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ, ಆದರೆ ನಾಪತ್ತೆಯಾದವರ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಸೇನೆ, ನೌಕಾಪಡೆ, ವಾಯುಪಡೆ, ಎನ್ಡಿಆರ್ಎಫ್ ಮತ್ತು ಇತರ ಏಜೆನ್ಸಿಗಳ ಜಂಟಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.
ವಯನಾಡಿನಲ್ಲಿ 45 ಪುನರ್ವಸತಿ ಶಿಬಿರಗಳನ್ನು ತೆರೆಯಲಾಗಿದ್ದು, 3,069 ಜನರಿಗೆ ವಸತಿ ಕಲ್ಪಿಸಲಾಗಿದೆ. ಇಂದಿನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳ್ಳಲಿದ್ದು, ಇನ್ನೂ ಮೂರು ಎನ್ಡಿಆರ್ಎಫ್ ತಂಡಗಳು ಮತ್ತು ಭಾರತೀಯ ಸೇನೆಯ ಶ್ವಾನದಳ ಕೂಡ ಕಾರ್ಯಾಚರಣೆಗೆ ಸೇರಲಿದೆ ಎಂದು ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯ ಸ್ಥಳದಿಂದ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಮಾಹಿತಿ ನೀಡಿದ್ದಾರೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ವಯನಾಡಿಗೆ ಭೇಟಿ ನೀಡಲಿದ್ದಾರೆ. ಏತನ್ಮಧ್ಯೆ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ತಿರುವನಂತಪುರ ಮತ್ತು ಕೊಲ್ಲಂ ಹೊರತುಪಡಿಸಿ 12 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ರಜೆ ಘೋಷಿಸಿದ್ದಾರೆ.