ವಯನಾಡ್, ಜು.30: ಮಂಗಳವಾರ ಬೆಳಗಿನ ಜಾವ ಕೇರಳದ ವಯನಾಡ್ ನ ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿಗೆ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸೇನಾ ಪಡೆಯ 225 ಮಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯದ ಮಾಹಿತಿ ಒದಗಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು 9497900402, 041 2721566 ಗೆ ಕರೆ ಮಾಡಬಹುದು. ಘಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ, ಸಾವನ್ನಪ್ಪಿದವರಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಲಾಗಿದೆ.
ರೈಲು ಭಾಗಶಃ ರದ್ದು: ವಳಥೋಲ್ ನಗರ ಮತ್ತು ವಡಕಂಚೇರಿ ನಡುವೆ ಭಾರೀ ನೀರು ನಿಂತಿರುವುದರಿಂದ ಕೆಲವು ರೈಲುಗಳನ್ನು ಇಂದು ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16305 ಎರ್ನಾಕುಲಂ – ಕಣ್ಣೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ತ್ರಿಶ್ಶೂರ್‌ನಲ್ಲಿ ಪ್ರಯಾಣ ಕೊನೆಗೊಳ್ಳಲಿದೆ, ರೈಲು ಸಂಖ್ಯೆ 16791 ತಿರುನಲ್ವೇಲಿ – ಪಾಲಕ್ಕಾಡ್ ಪಲರುವಿ ಎಕ್ಸ್‌ಪ್ರೆಸ್ ಆಲುವಾದಲ್ಲಿ ಕೊನೆಗೊಳ್ಳಲಿದೆ, ರೈಲು ಸಂಖ್ಯೆ 16302 ತಿರುವನಂತಪುರಂ – ಶೋರನೂರು ವೇನಾಡ್ ಎಕ್ಸ್‌ಪ್ರೆಸ್ ಚಾಲಕ್ಕುಡಿಯಲ್ಲಿ ಕೊನೆಗೊಳ್ಳಲಿದೆ.