ಉಡುಪಿ, ಜು.29: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದೆ. ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ ೨೦೨೪” ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಂತರ “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಓ.ಟಿ.ಪಿ ಆಯ್ಕೆಯನ್ನು ಮಾಡಬೇಕು. ನಂತರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ.ಟಿ.ಪಿಯನ್ನು ದಾಖಲಿಸಬೇಕು.
ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಒಂದು ವೇಳೆ ರೈತರು ಎಫ್.ಐ.ಡಿ ಸಂಖ್ಯೆಯನ್ನು ಹೊಂದಿಲ್ಲದಿದ್ದಲ್ಲಿ ಹತ್ತಿರದ ಕೃಷಿ ಅಥವಾ ತೋಟಗಾರಿಕ ಇಲಾಖೆಗಳ ಕಛೇರಿಗಳನ್ನು ಸಂಪರ್ಕಿಸಿ ಎಫ್.ಐ.ಡಿ ಸಂಖ್ಯೆಯನ್ನು ಮಾಡಿಸಿಕೊಳ್ಳಬಹುದಾಗಿದೆ. ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಬಹುದಾಗಿದೆ.
ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರ್ಕಾರದಿಂದ ಸುವರ್ಣಾವಕಾಶವನ್ನು ಕಲ್ಪಿಸಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು. ತಾಲೂಕಿನ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್‌ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್‌ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು -2024 ರ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿ ಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.