ಉಡುಪಿ, ಜು.28: ಕಳೆದ ಜೂನ್ 26 ರಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ರೈತಾ ಮೋರ್ಚಾ ಬೇಡಿಕೆಗಳಲ್ಲಿ ಒಂದಾದ ಹೈನುಗಾರರ ಕಳೆದ 7 ತಿಂಗಳ ಬೆಂಬಲ ಬೆಲೆಯನ್ನು ಹೈನುಗಾರರ ಖಾತೆಗೆ ಬಿಡುಗಡೆ ಮಾಡುವುದರ ಮೂಲಕ ಜಿಲ್ಲಾ ರೈತಾ ಮೋರ್ಚಾ ಹೋರಾಟಕ್ಕೆ ಮೊದಲ ಯಶಸ್ಸು ದೊರೆತಿದೆ ಎಂದು ಜಿಲ್ಲಾ ರೈತಾ ಮೋರ್ಚಾ ಅಧ್ಯಕ್ಷ ಕನ್ನಾರು ಕಮಲಾಕ್ಷ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕೇಂದ್ರದಲ್ಲಿ ನಡೆದ ಪ್ರತಿಭಟನೆ ರಾಜ್ಯ ವ್ಯಾಪಿ ಸುದ್ದಿಯಾಗಿದ್ದು ನಂತರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಡುಪಿ ಮಾದರಿಯ ಪ್ರತಿಭಟನೆ ನಡೆದಿತ್ತು. ಉಡುಪಿಯಿಂದ ಪ್ರಾರಂಭವಾದ ಪ್ರತಿಭಟನೆಯ ಪರಿಣಾಮ ರಾಜ್ಯದ ಸಮಸ್ತ ಹೈನುಗಾರರಿಗೆ ಸುಮಾರು 700 ಕೋಟಿಗಿಂತಲು ಹೆಚ್ಚು ಹಣ ಹೈನುಗಾರರಿಗೆ ಸಂದಾಯವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಮಸ್ತ ಜನತೆಗೆ ಉಡುಪಿ ರೈತಾ ಮೋರ್ಚಾ ಅಭಿನಂದನೆ ಸಲ್ಲಿಸುತ್ತದೆ. ಹೈನುಗಾರರ ಹಾಲಿನ ಬೆಂಬಲ ಬೆಲೆ 5ರೂ. ಹೆಚ್ಚಿಸುವುದು ಸೇರಿದಂತೆ ರೈತರ ಇನ್ನುಳಿದ ಬೇಡಿಕೆಗಳಾದ ಕರಾವಳಿ ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪಿಸುವುದು ಕೂಡ ರೈತಾ ಮೋರ್ಚಾದ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಸರಕಾರ “ಡಿಪ್ಲೋಮಾ ಕೃಷಿ ಕಾಲೇಜು” ಸ್ಥಾಪಿಸುವ ಯೋಜನೆಗೆ ಆಸಕ್ತಿ ಹೊಂದಿದ್ದು ಈ ಕೋರ್ಸಿನ ಮಾನ್ಯತೆಯ ಗೊಂದಲ ಭವಿಷ್ಯದ ಉದ್ಯೋಗವಕಾಶದ ಅನಿಶ್ವತತೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಪಾಲಕರು ಸಹ ಕೃಷಿ ಡಿಪ್ಲೋಮ ಕೋರ್ಸಗೆ ಆಸಕ್ತಿ ತೋರುತ್ತಿಲ್ಲ. ಪೂರ್ಣ ಪ್ರಮಾಣ ಕೃಷಿ ಕಾಲೇಜು ಸ್ಥಾಪಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಜೊತೆಗೆ 94ಸಿ, 94ಸಿಸಿ ಮತ್ತು ಅಕ್ರಮ ಸಕ್ರಮ 57 ಮತ್ತು 53ರ ಅಡಿ ಶಾಶ್ವತ ಮಂಜೂರಾತಿ ಪತ್ರ ನೀಡಬೇಕು ಜಿಲ್ಲೆಯನ್ನು ನೆರೆಪೀಡಿತ ಜಿಲ್ಲೆ ಎಂದು ಘೋಷಿಸಿ ಸಂತ್ರಸ್ತ ಜನರ ಆಸ್ತಿ ಪಾಸ್ತಿ ಮತ್ತು ಬೆಳೆ ಹಾನಿಗೆ ಗರಿಷ್ಠ ಪರಿಹಾರ ನೀಡಬೇಕು ಮತ್ತು ವರಾಹಿ ಬಲದಂಡೆ ಯೋಜನೆಯನ್ನು ತ್ವರಿತವಾಗಿ ಪ್ರಾರಂಬಿಸಿ ಮುಗಿಸಬೇಕು ಎಂದು ರೈತ ಮೋರ್ಚಾ ವತಿಯಿಂದ ರಾಜ್ಯ ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.