ಉಡುಪಿ, ಜು.23: ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಖಾಸಗಿ ಬಸ್ ಮತ್ತು ಶಾಲಾ ವಾಹನಗಳಲ್ಲಿ ಅಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ/ಪ್ರಯಾಣಿಕರು ಸಂಚರಿಸುತ್ತಿರುವುದು ಹಾಗೂ ನಿಗದಿತ ವೇಗದ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ಹಿನ್ನಲೆ ಬಸ್‌ಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಖಾಸಗಿ ಬಸ್ ಮಾಲಿಕರಿಗೆ ಮತ್ತು ಶಾಲಾ ವಾಹನಗಳನ್ನು ಹೊಂದಿರುವ ಶಾಲಾ ಮುಖ್ಯಸ್ಥರುಗಳು ಈ ಕೆಳಕಂಡ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚಿಸಿರುತ್ತಾರೆ.
ಸಂಚರಿಸುವ ಬಸ್‌ಗಳು ಫಿಟ್‌ನೆಸ್ ಪ್ರಮಾಣಪತ್ರ ಮತ್ತು ವಿಮಾ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಅನುಮತಿಸುವ ಮಿತಿಯನ್ನು ಮೀರಿ ಹೊಗೆಯನ್ನು ಹೊರಸೂಸಬಾರದು. ನೊಂದಾಯಿತ ಆಸನ ಸಾಮರ್ಥ್ಯದ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸಂಚರಿಸುವಂತಿಲ್ಲ. ನಿಗದಿತ ವೇಗದ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಬಸ್‌ಗಳನ್ನು ಚಲಿಸುವಂತಿಲ್ಲ. ವೇಗದ ಮಿತಿಯನ್ನು ಅನುಸರಿಸಬೇಕು. ಚಾಲನಾ ಅನುಭವ ಇರುವ ಬಸ್ ಚಾಲಕರನ್ನೇ ನಿಯೋಜಿಸಬೇಕು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಣೆ ತಿಳಿಸಿದೆ.