ಮಣಿಪಾಲ, ಜು.20: ಅಪ್ಲಾಸ್ಟಿಕ್ ಅನೀಮಿಯಾ ದಿಂದ ಬಳಲುತ್ತಿರುವ 15 ವರ್ಷದ ಬಾಲಕನಿಗೆ ಅಸ್ಥಿ ಮಜ್ಜೆ ಕಸಿಯೊಂದೆ ಪರಿಹಾರವಾಗಿತ್ತು. ಇದಕ್ಕೆ ಸುಮಾರು 20 ರಿಂದ 20 ಲಕ್ಷ ಖರ್ಚು ಆಗಬಹುದೆಂದು ಚಿಕಿತ್ಸೆ ನೀಡುತ್ತಿರುವ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯರು ತಿಳಿಸಿದ್ದರು. ಬಡವರಾಗಿದ್ದ ಕುಟುಂಬಸ್ಥರಿಗೆ ಇದನ್ನು ಭರಿಸುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ್ ಭಟ್ ತಂಡದವರು ಹೋಂ ಡಾಕ್ಟರ್ ಫೌಂಡೇಶನ್ ನ ನೇತೃತ್ವ ವಹಿಸಿರುವ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಸಹಕರಿಸುವಂತೆ ಮನವಿ ಮಾಡಿದರು.
ಅವರು ತಮ್ಮ ಫೌಂಡೇಶನ್ ನ ಸದಸ್ಯರು ಮತ್ತು ದಾನಿಗಳ ಸಹಕಾರದೊಂದಿಗೆ 22 ದಿನದಲ್ಲಿ 20 ಲಕ್ಷ ಸಂಗ್ರಹಿಸಿ ಬಾಲಕನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಇದರ ಕುರಿತು ನಿಧಿ ಹಸ್ತಾಂತರ ಮತ್ತು ಶುಭ ಕೋರುವ ಕಾರ್ಯಕ್ರಮವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಡಾ ಶಶಿಕಿರಣ್ ಶೆಟ್ಟಿ ಮಾತನಾಡಿ, ನಾವು ಈಗಾಗಲೇ ಸಣ್ಣ ಮೊತ್ತದ ನೆರವು ನೀಡುವ ಮೂಲಕ ಹಲವಾರು ನೊಂದವರಿಗೆ, ಅಶಕ್ತರಿಗೆ ಸಹಾಯ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಸಂಗ್ರಹಣಾ ಉದ್ದೇಶದೊಂದಿಗೆ ಯಶಸ್ವಿಯಾಗಿದ್ದೇವೆ ಎಂದರು. ಸಣ್ಣ ಮೊತ್ತದಿಂದ ದೊಡ್ಡ ಮೊತ್ತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
ಕೆಎಂಸಿ ಮಣಿಪಾಲದ ಸಹ ಡೀನ್ ಡಾ. ನವೀನ್ ಸಾಲಿನ್ಸ್ ಅವರು ಹೋಂ ಡಾಕ್ಟರ್ ಫೌಂಡೇಶನ್ ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಅಭಿನಂದಿಸಿದರು. ಇದು ಇಡೀ ಸಮಾಜಕ್ಕೆ ಮಾದರಿಯಾಗಿದೆ, ಇನ್ನಷ್ಟು ದಾನಿಗಳು ಮತ್ತು ಸಂಸ್ಥೆಗಳು ಬಡ ಮಕ್ಕಳ ಚಿಕಿತ್ಸೆಗೆ ಸಹಕರಿಸಬೇಕು ಎಂದರು. ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ವಾಸುದೇವ್ ಭಟ್ ಅವರು, ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾತ್ರ ಮಕ್ಕಳ ಬೋನ್ ಮ್ಯಾರೋ ಟ್ರಾನ್ಸಪ್ಲಾಂಟೇಷನ್ ಮಾಡುತ್ತಿದ್ದೇವೆ ಎಂದರು. ಹಣ ಸಂಗ್ರಹಣೆಗೆ ಸಹಕರಿಸಿದ ನಿಸ್ವಾರ್ಥ ದಾನಿಗಳನ್ನು ಅಭಿನಂದಿಸಲಾಯಿತು. ಡಾ ಶಶಿಕಿರಣ್ ಶೆಟ್ಟಿ ಅವರನ್ನು ಆಸ್ಪತ್ರೆಯ ಪರವಾಗಿ ಅಭಿನಂದಿಸಲಾಯಿತು. ಸಹಾಯಕ ವೈದ್ಯರು, ಹೋಂ ಡಾಕ್ಟರ್ ಫೌಂಡೇಶನ್ ನ ಸದಸ್ಯರು, ಪತ್ರಕರ್ತ ಜನಾರ್ದನ್ ಕೊಡವೂರು, ಮೋಹನ್ ಶೆಟ್ಟಿ ಹಾಗೂ ದಾನಿಗಳು ಉಪಸ್ಥಿತರಿದ್ದರು.