ಪುರಿ, ಜು.7: ಜಗನ್ನಾಥ, ಬಲಭದ್ರ, ದೇವಿ ಸುಭದ್ರ ಮತ್ತು ಸುದರ್ಶನರ ವಿಶ್ವವಿಖ್ಯಾತ ರಥಯಾತ್ರೆ ಭಾನುವಾರ ಸಂಜೆ ಒರಿಸ್ಸಾದ ಪುರಿ ಪುರಿಯಲ್ಲಿ ಪ್ರಾರಂಭವಾಯಿತು. ಮೂರು ರಥಗಳು ಸಾಗುವ ಗ್ರ್ಯಾಂಡ್ ಟ್ರಂಕ್ ರಸ್ತೆ ಭಕ್ತರ ಸಾಗರವಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದು ಪ್ರಾರ್ಥನೆ ಸಲ್ಲಿಸಿದರು. 12 ನೇ ಶತಮಾನದ ಜಗನ್ನಾಥ ದೇವಾಲಯದಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಕಡೆಗೆ ಸಾವಿರಾರು ಜನರು ಬೃಹತ್ ರಥಗಳನ್ನು ಎಳೆದರು.
ಪುರಿ ಜಗನ್ನಾಥ ರಥಯಾತ್ರೆಯ ಧಾರ್ಮಿಕ ವಿಧಿವಿಧಾನಗಳ ಕಿರು ನೋಟ:
ರಥ ಸ್ನಾನ: ಭವ್ಯ ಮೆರವಣಿಗೆಯ ಒಂದು ದಿನ ಮೊದಲು, ರಥ ಸ್ನಾನ ನಡೆಯುತ್ತದೆ. ಇದು 108 ಕಲಶಗಳಲ್ಲಿ ಸುಗಂಧ ದ್ರವ್ಯ ಒಳಗೊಂಡ ರಥಸ್ನಾನ ಸಂಪ್ರದಾಯ ಪ್ರಯಾಣ ಬೆಳೆಸುವ ಮೊದಲು ರಥದ ಶುದ್ಧೀಕರಣವನ್ನು ಸೂಚಿಸುತ್ತದೆ.
ರಥ ಪ್ರತಿಷ್ಠಾ: ವಿಧ್ಯುಕ್ತ ಸ್ನಾನದ ನಂತರ, ಹೊಸದಾಗಿ ನಿರ್ಮಿಸಲಾದ ರಥಗಳನ್ನು ರಥ ಪ್ರತಿಷ್ಠಾ ಎಂಬ ಆಚರಣೆಯಲ್ಲಿ ಪವಿತ್ರಗೊಳಿಸಲಾಗುತ್ತದೆ. ಪುರೋಹಿತರು ಮಂತ್ರಗಳನ್ನು ಪಠಿಸಿ ಪ್ರಯಾಣಕ್ಕೆ ಅಣಿಗೊಳಿಸುತ್ತಾರೆ.
ರಥಯಾತ್ರೆ: ಉತ್ಸವದ ಪರಾಕಾಷ್ಠೆ ರಥಯಾತ್ರೆಯಾಗಿದ್ದು, ಗುಂಡಿಚಾ ದೇವಾಲಯದ ಕಡೆಗೆ ಭವ್ಯವಾದ ರಥಗಳನ್ನು ಎಳೆಯಲು ಸಾವಿರಾರು ಭಕ್ತರು ಸೇರುತ್ತಾರೆ. ದೇವತೆಗಳು ಒಂಬತ್ತು ದಿನಗಳ ಕಾಲ ಗುಂಡಿಚಾ ದೇವಾಲಯದಲ್ಲಿ ನೆಲೆಸುತ್ತಾರೆ. ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಬಹುದ ಯಾತ್ರೆ: ಒಂಬತ್ತು ದಿನಗಳ ವಾಸ್ತವ್ಯದ ನಂತರ, ದೇವತೆಗಳು ಬಹುದ ಯಾತ್ರೆ ಎಂದು ಕರೆಯಲ್ಪಡುವ ಇದೇ ರೀತಿಯ ಮೆರವಣಿಗೆಯಲ್ಲಿ ಜಗನ್ನಾಥ ದೇವಾಲಯಕ್ಕೆ ಹಿಂದಿರುಗುತ್ತಾರೆ.
ನೀಲಾದ್ರಿ ವಿಜಯ (ರಥ ವಿಸರ್ಜನೆ): ನೀಲಾದ್ರಿ ವಿಜಯ, ರಥಗಳ ವಿಸರ್ಜನೆಯೊಂದಿಗೆ ಉತ್ಸವ ಮುಕ್ತಾಯವಾಗುತ್ತದೆ. ಮುಂಬರುವ ವರ್ಷದಲ್ಲಿ ರಥಗಳ ನವೀಕರಣದ ಭರವಸೆಯನ್ನು ಸಂಕೇತಿಸುತ್ತದೆ.