ಕೋಟ, ಜು.7: ಸೇವಾನಿರತ ಸಾಧಕ ಸಂಸ್ಥೆಗಳ ಪದಾಧಿಕಾರಿಯಾಗುವುದು ಯೋಗ. ಅನವರತವೂ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸಮಾಜಮುಖಿಯಾಗಿ ಕಾಣಿಸಿಕೊಂಡ ಗಣಪತಿ ಟಿ. ಶ್ರೀಯಾನ್ ಹಾಗೂ ಕೃಷ್ಣ ಮೊಗವೀರ ಈರ್ವರೂ ಸೇವಾನಿರತರು. ಯಶಸ್ವೀ ಕಲಾವೃಂದ ಇಂತಹ ಅನೇಕ ಪ್ರತಿಭಾನ್ವಿತರನ್ನು ಇದೇ ವೇದಿಕೆಯಲ್ಲಿ ಗುರುತಿಸಿರುವುದು ಸ್ತುತ್ಯರ್ಹ. ಸಾಮಾಜಿಕ ಬದ್ಧತೆ ಇರುವವರನ್ನು ಮಾತ್ರ ರೋಟರಿಯಂತಹ ಸಂಸ್ಥೆ ಗುರುತಿಸುವುದು. ಇಂಥವರು ಸಮಾಜದಲ್ಲಿ ಬಹು ಎತ್ತರಕ್ಕೆ ಏರಲು ಸಾಧ್ಯ. ಯಶಸ್ವೀ ಕಲಾವೃಂದ ಚಿಕ್ಕ ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಿ ಕಲಾತ್ಮಕ ಬದುಕನ್ನು ಕಲ್ಪಿಸುವಂತಹ ಸಂಸ್ಥೆ. ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ ರೋಟರಿ ಸಂಸ್ಥೆಯ ಚುಕ್ಕಾಣಿ ಹಿಡಿದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೆರಿಯ ಮಾಸ್ಟರ್ ಅಭಿಪ್ರಾಯಪಟ್ಟರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ದಿಮ್ಸಾಲ್ ಫಿಲ್ಸ್ ಹಾಗೂ ಧಮನಿ ಟ್ರಸ್ಟ್ ಸಹಯೋಗದೊಂದಿಗೆ ‘ಸಿನ್ಸ್ 1999 ಶ್ವೇತಯಾನ-40’ರ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆಯ ನೂತನ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಹಾಗೂ ಕಾರ್ಯದರ್ಶಿ ಕೃಷ್ಣ ಮೊಗವೀರ ಇವರನ್ನು ಅಭಿನಂದಿಸಿ ಶಿಕ್ಷಕ ಹೆರಿಯ ಮಾಸ್ಟರ್ ಮಾತನಾಡಿದರು. ಕಾಯ ಅಳಿದರೂ ಕೀರ್ತಿ ಬೆಳಗಬೇಕು. ಈ ನಿಟ್ಟಿನಲ್ಲಿ ಈರ್ವರೂ ಪದಾಧಿಕಾರಿಗಳೂ ಬಹಳಷ್ಟು ಶ್ರಮಿಸುತ್ತಿರುವುದು ಸಮಾಜ ಮನಗಂಡಿದೆ. ಯಶಸ್ವೀ ಕಲಾವೃಂದ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ತಿಂಗಳ ಅಂತರದಲ್ಲಿಯೇ ವೇದಿಕೆ ಏರಿ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ಶ್ವೇತಯಾನ ಕಾರ್ಯಕ್ರಮಕ್ಕೆ ಪೋಷಕರು ಹಾಗೂ ಪ್ರಾಯೋಜಕರು ಪ್ರೋತ್ಸಾಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು ಹೇಳಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ, ಮೋಹನಚಂದ್ರ ಪಂಜಿಗಾರು, ದೀಪಿಕಾ ಸಾಮಗ, ಗೋಪಾಲ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದ ಮಕ್ಕಳ ಮೇಳದ ಕಲಾವಿದರಿಂದ ‘ಸುಧನ್ವಾರ್ಜುನ’ ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.