ಕೋಟ, ಜು.3: ಸಾಹಿತ್ಯ ಎಂದರೆ ಕೇವಲ ಕವನ ಮತ್ತು ಕಥೆಯಲ್ಲ. ಸಾಹಿತ್ಯವು ಮನುಷ್ಯನ ಏಕಾಂತವನ್ನು ದೂರ ಮಾಡುತ್ತದೆ. ಹಕ್ಕಿಗಳಿಗೆ ರೆಕ್ಕೆ ಬಂದಾಗ, ಹಕ್ಕಿಗಳು ರೆಕ್ಕೆಯ ಮೇಲಿನ ಆತ್ಮವಿಶ್ವಾಸದಿಂದ ಹಾರುವಂತೆ, ಕಥೆ-ಕವನಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಜ್ಞಾನ ಹೆಚ್ಚುತ್ತದೆ. ಆಗ ಆ ವಿದ್ಯಾರ್ಥಿಯು ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಲ್ಲ. ಸಾಹಿತ್ಯವನ್ನು ಓದುವುದರಿಂದ ವಿದ್ಯಾರ್ಥಿಗಳ ನೈತಿಕ ಮೌಲ್ಯ ಹೆಚ್ಚುತ್ತದೆ. ಅದರ ಪರಿಣಾಮವಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಜೀವನದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಾಹಿತ್ಯವು ಮನಸ್ಸಿನ ಕೊಳೆಯನ್ನು ತೆಗೆಯುವ ಸಾಬೂನು ಎಂದು ಕಥೆ, ಕವನದ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಎಚ್ ಸುಜಯೀಂದ್ರ ಹಂದೆ ತಿಳಿಹೇಳಿದರು. ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದ ಪ್ರೇಮಾನಂದ ಮತ್ತು ಶಂಭು ಭಟ್ ಹಂದೆಯವರನ್ನು ಸನ್ಮಾನಿಸಿದರು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಸಂಘದ ಸಂಚಾಲಕಿ ನಳಿನಾಕ್ಷಿ ವಂದಿಸಿದರು. ಸಾಹಿತ್ಯ ಸಂಘದ ಅಧ್ಯಕ್ಷ ವಿದ್ಯಾರ್ಥಿ ಅಮಿತ್ ಕಾರ್ಯಕ್ರಮ ನಿರೂಪಿಸಿದರು. ನಿಧೀಶ ಭಟ್ ಪ್ರಾರ್ಥಿಸಿದರು.