ಉಡುಪಿ, ಜೂ.30: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಅವರೊಂದಿಗೆ ಶಾಸಕ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ನೀರು ಸರಾಗವಾಗಿ ಹರಿಯಲು ತಾತ್ಕಾಲಿಕವಾಗಿ ಸೇತುವೆಯ ಕೆಳಭಾಗದ ಹೂಳು ಹಾಗೂ ಕಸಕಡ್ಡಿಗಳನ್ನು ತಕ್ಷಣ ತೆರವು ಮಾಡಲು ಕ್ರಮ ಕೈಗೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಜೇಶ್ ಪೂಜಾರಿ, ಶಶಿಧರ ಪೂಜಾರಿ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.