ಬಾರ್ಬಡೋಸ್, ಜೂ.29: (ಉಡುಪಿ ಬುಲೆಟಿನ್ ವರದಿ) ಕೊನೆಗೂ ಕನಸು ನನಸಾಗಿದೆ. ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ಒಲಿದಿದೆ. ತನ್ಮೂಲಕ ಎರಡನೇ ಬಾರಿಗೆ ಟಿ20 ವಿಶ್ವ ಚ್ಯಾಂಪಿಯನ್ ಆಗಿ ಮೂಡಿಬಂದಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ದಕ್ಷಿಣ ಆಫ್ರಿಕಾದ ವಿರುದ್ಧ 7 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ದಕ್ಷಿಣ ಆಫ್ರಿಕಾಗೆ ಕಠಿಣ ಸವಾಲು ನೀಡಿತು. ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಪಾಂಡ್ಯ ಕ್ಲೈಮಾಕ್ಸ್: ಗೆಲ್ಲಲು 30 ರನ್ ಗಳು ಬೇಕಾದಾಗ ಗೆಲುವಿನ ಮಾಲೆ ಆಫ್ರಿಕಾದ ಕಡೆಗೆ ಇತ್ತು. ಕ್ಲಾಸನ್ ಮತ್ತು ಮಿಲ್ಲರ್ ಜತೆಯಾಟದಿಂದ ಗೆಲುವು ಭಾರತದ ಕೈತಪ್ಪಿ ಹೋಯಿತು ಎನ್ನುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿನ ದಾಳಿ ನಡೆಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಲಯ ಕಂಡುಕೊಂಡ ಕೊಹ್ಲಿ: ಈ ಬಾರಿಯ ವಿಶ್ವಕಪ್ ನಲ್ಲಿ ಸತತ ವೈಫಲ್ಯಗಳನ್ನು ಕಂಡುಕೊಂಡಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಜವಾಬ್ದಾರಿಯುತವಾಗಿ ಆಡಿದರು. ಭಾರತ ಆರಂಭಿಕ ಆಘಾತವನ್ನು ಅನುಭವಿಸಿದಾಗ ತಂಡಕ್ಕೆ ಬೆನ್ನೆಲುಬಾಗಿ ನಿಂತ ಕೊಹ್ಲಿ, ಅಕ್ಷರ್ ಪಟೇಲ್ ಹಾಗೂ ಶಿವಮ್ ದುಬೆ ಜತೆ ಸೇರಿಕೊಂಡು ಗೌರವಯುತ ಸ್ಕೋರ್ ಕಲೆ ಹಾಕಲು ಪ್ರಮುಖ ಕೊಡುಗೆ ನೀಡಿದರು. ಕೊಹ್ಲಿ 59 ಎಸೆತಗಳಿಂದ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್, ದುಬೆ 27 ರನ್ ಗಳಿಸಿದರು.
ಅಜೇಯ ಭಾರತ: ಈ ಬಾರಿಯ ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಗೆಲುವು ಸಾಧಿಸುವ ಮೂಲಕ ನೂತನ ದಾಖಲೆ ಬರೆದಿದ್ದು ಅಜೇಯವಾಗಿ ದಿಗ್ವಿಜಯ ಸಾಧಿಸಿದೆ. 2007 ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದುಕೊಂಡಿದನ್ನು ಇಲ್ಲಿ ಸ್ಮರಿಸಬಹುದು.