ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಜೂ.28: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಅಜೇಯವಾಗಿವೆ. ಉಭಯ ತಂಡಗಳೂ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲೂ ಅಪೂರ್ವ ಪ್ರದರ್ಶನ ತೋರಿವೆ. ಬುಮ್ರಾ ಮತ್ತು ಕುಲದೀಪ್ ಯಾದವ್ ಈಗಾಗಲೇ ಉತ್ತಮ ಬೌಲಿಂಗ್ ಮಾಡುತ್ತಿದ್ದು, ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅಕ್ಷರ್ ಪಟೇಲ್ ಅವರ ಅದ್ಭುತ ಸ್ಪೆಲ್ ಭಾರತದ ವರ್ಧಿತ ಬೌಲಿಂಗ್ ದಾಳಿಯನ್ನು ತೋರಿಸುತ್ತದೆ. ನಾಯಕ ರೋಹಿತ್ ಶರ್ಮಾ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಬಿರುಸಿನ ಮತ್ತು ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿ ಸತತ ಎರಡು ಅರ್ಧಶತಕ ಗಳಿಸಿದ್ದಾರೆ. ಆದರೆ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಅವರ ನಿರಂತರ ಕಳಪೆ ಪ್ರದರ್ಶನವು ಟೀಂ ಇಂಡಿಯಾಗೆ ಕಳವಳಕಾರಿ ವಿಷಯವಾಗಿದೆ.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತನ್ನ ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಅನ್ನು ನಾಳೆ ಆಡಲಿದೆ. ಕ್ಲಾಸೆನ್, ಮಿಲ್ಲರ್, ಸ್ಟಬ್ಸ್ ಇವರಿಂದ ಕೂಡಿದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಇರುವ ದಕ್ಷಿಣ ಆಫ್ರಿಕಾಗೆ 6 ಅಡಿ 10 ಇಂಚಿನ ದೈತ್ಯ ವೇಗಿ ಮಾರ್ಕೊ ಜಾನ್ಸೆನ್ ಅವರ ಮಾರಕ ದಾಳಿ ವರದಾನವಾಗಿದೆ. ದಕ್ಷಿಣ ಆಫ್ರಿಕಾದ ದಾಳಿಯನ್ನು ರೋಹಿತ್ ಪಡೆ ಯಶಸ್ವಿಯಾಗಿ ಎದುರಿಸಿ ಪ್ರಶಸ್ತಿ ಗೆದ್ದು ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಗಿದ್ದ ಸೋಲಿನ ನೋವನ್ನು ಅಳಿಸಿ ಟಿ20 ವಿಶ್ವಕಪ್ 2024 ಗೆಲುವಿನ ಸಿಹಿಯನ್ನು ನೀಡಲಿ ಎಂಬುದು ಕೋಟ್ಯಾಂತರ ಭಾರತೀಯರ ಹಾರೈಕೆ. ಗುಡ್ ಲಕ್ ಟೀಂ ಇಂಡಿಯಾ.