ಪರಮಾತ್ಮನು ಎಲ್ಲವೂ ಕೊಟ್ಟರೂ ಮನುಷ್ಯನಿಗೆ ಸಂತೃಪ್ತಿ ಎಂಬುದಿಲ್ಲ. ಜೀವನದಲ್ಲಿ ಸುಖ ಸಂತೋಷವನ್ನು ಎಲ್ಲೆಲ್ಲೋ ಹುಡುಕುತ್ತಾ ಹೋಗುತ್ತೇವೆ. ಭೋಗ ವಸ್ತುಗಳಲ್ಲಿ ತಲ್ಲೀನರಾಗುತ್ತೇವೆ, ಅದೇ ಜೀವನವೆಂದು ನಂಬಿ ಸಾಗುತ್ತೇವೆ. ಆದರೆ ಒಂದು ದಿನ ಆ ವಸ್ತುವಿನ ಮೇಲೆ ಮೋಹ ಬಿಟ್ಟು ಹೋಗುತ್ತದೆ. ಎಷ್ಟು ಪ್ರಿಯವಾಗಿರುತ್ತೋ ಹಳೆಯದಾದ ಮೇಲೆ ಅದು ಅಷ್ಟೇ ಬೇಡವಾದ ವಸ್ತುವಾಗಿಬಿಡುತ್ತದೆ ಅಲ್ಲವೇ? ಹಾಗಾದರೆ ಸಂತೃಪ್ತಿ, ಆನಂದ ಎಲ್ಲಿದೆ? ಹುಡುಕೋಣ ಬನ್ನಿ. ನಾವು ಯಾವುದೇ ವಸ್ತುವನ್ನು ಶಾಶ್ವತವಾಗಿ ಪ್ರೀತಿಸಲು ಆಗುವುದಿಲ್ಲ. ಆದ್ದರಿಂದ ತೃಪ್ತಿ, ಭೋಗ ವಸ್ತುಗಳಿಂದ ಸಿಗುವುದಿಲ್ಲವೆಂಬುದು ಖಚಿತ. ಇನ್ನು ಸಂಬಂಧಗಳು ಹೇಗೆ ಎಂದರೆ ನಮಗೆ ಸಹಾಯವಾಗುವುದಾದರೆ ಇಟ್ಟುಕೊಳ್ಳುತ್ತೇವೆ. ಎಲ್ಲರೂ ಹಾಗೆ ಎಂದು ಹೇಳುವುದಲ್ಲ. ಪ್ರೀತಿಯೆಂಬುದು ಸಂಬಂಧಗಳಲ್ಲಿಯೂ ಇದೆ. ಗಂಡ-ಹೆಂಡತಿ ಮಕ್ಕಳು ತಾಯಿ-ತಂದೆ ಗೆಳೆಯರು ಹೀಗೆ ಪ್ರೀತಿ ಇದ್ದೇ ಇರುತ್ತದೆ. ಆದರೆ ಅದು ಶಾಶ್ವತವಾಗಿ ಇರುವುದಿಲ್ಲ. ಇನ್ನು ಸಮಾಜಕ್ಕೆ ಬರೋಣ. ಸಮಾಜದಲ್ಲಿ ಪ್ರೀತಿ ಸೌಹಾರ್ದತೆ ಮುಖ್ಯ. ಅದು ಔದ್ಯೋಗಿಕ ಪ್ರೀತಿ ಅದೂ ಶಾಶ್ವತವಲ್ಲ. ಇನ್ನು ಉಳಿದದ್ದು ನಮ್ಮನ್ನು ನಾವು ಪ್ರೀತಿಸುವುದು. ಇದು ಸಾಯುವವರೆಗೆ ಇರುತ್ತದೆ ಆದರೆ ಅದು ನಮ್ಮ ಬಗ್ಗೆ ಆಯ್ತು.
ನಮ್ಮನ್ನು ನಾವು ಪ್ರೀತಿಸುವುದು ಎಂದರೆ ಏನು? ನಮ್ಮನ್ನು ನಾವು ಪ್ರೀತಿಸುವುದೆಂದರೆ ನಮಗೆ ಜೀವನದಲ್ಲಿ ಬೇಕಾದುದನ್ನು ಪಡೆಯುವುದು. ನಮ್ಮನ್ನು ಗೌರವಿಸುವುದು. ನಮ್ಮ ಸಾಧನೆಯತ್ತ ಪಯಣ ಬೆಳೆಸುವುದು. ನಮ್ಮ ಸಾಧನೆಯ ಮೇಲೆ ಹೆಮ್ಮೆ ಪಡುವುದು. ಆದರೆ ಇದೆಲ್ಲವೂ ಶಾಶ್ವತ ಸಂತೋಷ ನೀಡುತ್ತದೆಯೇ ನೀವೇ ಯೋಚಿಸಿ. ಒಂದು ಗುರಿ ತಲುಪಿದ ತಕ್ಷಣ ಇನ್ನೊಂದು ಗುರಿಯತ್ತ ಓಡುತ್ತೇವೆ ಹೌದಲ್ಲವೇ? ಜೀವನದಲ್ಲಿ ಸುಮ್ಮನೆ ಕೂಡಲಾಗುವುದಿಲ್ಲ. ಏನಾದರೂ ಸಾಧಿಸಬೇಕು, ಇತರರಿಗೆ ಮಾದರಿಯಾಗಬೇಕು, ಸಹಾಯ, ದಾನ ಮಾಡಬೇಕು ನಿಜ. ಆದರೆ ಅದು ಶಾಶ್ವತವಲ್ಲ. ಹಾಗಾದರೆ ಆನಂದವೆಲ್ಲಿದೆ? ನಮ್ಮ ಪರಿಸರದಲ್ಲಿ. ಹೌದು! ನಾವು ಪರಿಸರದ ಮಧ್ಯದಲ್ಲಿ ಇದ್ದೇವೆ ಆದರೆ ಯಾವತ್ತೂ ಗಮನ ಕೊಡಲೇ ಇಲ್ಲ. ಬೀಸುವ ಗಾಳಿಯನ್ನು ಸವಿದ್ದದ್ದೇವೆಯೇ? ಮಳೆ ನೀರಿನಲ್ಲಿ ಆಡಿದ್ದೇವೆಯೇ? ಮೋಡ, ಆಕಾಶ, ಕೀಟ, ಕ್ರಿಮಿ, ಪ್ರಾಣಿಗಳನ್ನು ತದೇಕ ಚಿತ್ತದಿಂದ ನೋಡಿದ್ದೇವೆಯೇ? ಎಷ್ಟು ಸುಂದರ ಈ ಪ್ರಪಂಚ ಎಂಬುದು ಎಂದಾದರೂ ಅನಿಸಿದೆಯೇ? ಪ್ರಕೃತಿ ರೌದ್ರಾವತಾರ ತಾಳಿದಾಗ ಮಾತ್ರ ನಾವು ಅದರ ಬಗ್ಗೆ ಬೇಸರ ಪಡುತ್ತೇವೆ. ಆದರೆ ದಿನನಿತ್ಯ ಕಂಡುಬರುವ ಸುಂದರ ಸೃಷ್ಟಿಯನ್ನು ನಿರ್ಲಕ್ಷಿಸುತ್ತೇವೆ. ಇವತ್ತಿನಿಂದ ನಮ್ಮ ಅವಿಶ್ರಾಂತ ಕೆಲಸವನ್ನು ಬಿಟ್ಟು ದಿನಕ್ಕೆ ಒಂದು 10 ನಿಮಿಷ ಪರಿಸರದ ಜೊತೆ ಕಾಲ ಕಳೆಯೋಣ. ಶಾಶ್ವತವಾದ ಆನಂದ ಎಲ್ಲಿದೆ ಎಂಬುದು ತಿಳಿಯುತ್ತದೆ.
-ಡಾ. ಹರ್ಷಾ ಕಾಮತ್