ಉಡುಪಿ, ಜೂ.27: 2024-25 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಈ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು ರೈತರ ಪಹಣಿಯಲ್ಲಿ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಯೋಜನೆಯಲ್ಲಿ ನೊಂದಣಿ ಮಾಡಿಸಲು ಜುಲೈ 1 ಕೊನೆಯ ದಿನ. ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಮತ್ತು ಡಿಜಿಟಲ್ ಇ-ಸೇವಾ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ. ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ಗಳನ್ನು ವಿಮಾ ಘಟಕಗಳಾಗಿ ಸರ್ಕಾರದ ಆದೇಶದಲ್ಲಿ ಅಧಿಸೂಚಿಸಲಾಗಿದ್ದು ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಚಿಕವಾಗಿದ್ದು ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೊಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಮುಚ್ಚಳಿಕೆ ಪತ್ರವನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ನೀಡಬೇಕಾಗಿರುತ್ತದೆ.
ವಿಮೆ ಮಾಡಿಸುವ ರೈತರು ಫ್ರುಟ್ ತಂತ್ರಾಂಶದ ನೊಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು ಸದರೀ ನೊಂದಣಿ ಸಂಖ್ಯೆಗೆ ಪಹಣಿ ವಿವರವನ್ನು ಜೋಡಿಸಿಕೊಳ್ಳಬೇಕಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.