ಉಡುಪಿ, ಜೂ.25: ಬ್ಯಾಂಕ್‌ಗಳ ಮ್ಯಾನೆಜರ್‌ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಜನಸಾಮಾನ್ಯರ ದೈನಂದಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ಉತ್ತಮ ಸೇವೆಯನ್ನು ಒದಗಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬ್ಯಾಂಕಿನ ವ್ಯವಹಾರಗಳು ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಾಗಲು ಹಾಗೂ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಮನ್ವಯವನ್ನು ಸುಲಭಗೊಳಿಸಲು ಬ್ಯಾಂಕ್‌ಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಇಲಾಖೆಗಳನ್ನೊಳಗೊಂಡಂತೆ ಸಮಿತಿಯ ಸಭೆಯನ್ನು ಕರೆಯಲಾಗುತ್ತದೆ. ಈ ಸಭೆಗೆ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳ ಅಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಹಾಜರಾಗಬೇಕೆಂದು ಸೂಚನೆ ನೀಡಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಯ ಉದ್ಯಮಿಗಳನ್ನು ಬೆಂಬಲಿಸಿ ಉದ್ಯೋಗಾವಕಾಶ ಸೃಷ್ಠಿಸಲು 595 ಫಲಾನುಭವಿಗಳಿಗೆ 39.98 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ವಿಶೇಷ ಗಮನ ಕಾರ್ಯಕ್ರಮಗಳ ಅಡಿಯಲ್ಲಿ ಬ್ಯಾಂಕುಗಳು ದುರ್ಬಲ ವರ್ಗಗಳಿಗೆ 1793 ಕೋಟಿ ರೂ., ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ 158.72 ಕೋಟಿ ರೂ., ವಸತಿ ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಗಾಗಿ 1078 ಕೋಟಿ ರೂ. ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು. ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕಳೆದ ಸಾಲಿನಲ್ಲಿ 51,494 ಕೋಟಿ ರೂ. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 57,467 ಕೋಟಿ ರೂ ವ್ಯವಹಾರ ನಡೆದು, 5973 ಕೋಟಿ ರೂ. ಹೆಚ್ಚಾಗಿ ಶೇ.11.60 ರಷ್ಟು ಬೆಳೆವಣಿಗೆಯಾಗಿದೆ. ಆರ್ಥಿಕತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲು ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯವಹಾರ ಚಟುವಟಿಕೆಗಳಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಈ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರಿಗೆ ಅರಿವು ಮೂಡಿಸುವುದರೊಂದಿಗೆ ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು ಎಂದರು.
ಕೆನರಾ ಬ್ಯಾಂಕ್‌ನ ರೀಜನಲ್ ಮ್ಯಾನೆಜರ್ ಶೀಬಾ ಶೆಹಜಾನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ.46.06 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.46.94 ರಷ್ಟು ಬೆಳವಣಿಗೆಯಾಗಿದ್ದು, ಶೇ. 0.88 ರಷ್ಟು ಸಾಧನೆ ಮಾಡಲಾಗಿದ್ದರೂ ಸಹ ಸಿ.ಡಿ ಅನುಪಾತದಲ್ಲಿ ಜಿಲ್ಲೆಯು ಶೇ. 50 ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದ್ದು, ಇದನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂರ‍್ಸ್ಗಳು ಕಾರ್ಯಪ್ರವೃತ್ತರಾಗಬೇಕು ಎಂದರು. ಸಭೆಯಲ್ಲಿ ಮಡಿಕೇರಿಯ ಡಿ.ಡಿ.ಎಮ್. ರಮೇಶ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಆರ್.ಬಿ.ಐ ನ ಎಕ್ಸಿಕ್ಯುಟಿವ್ ಈಲ್ಲಾ ಸಾಹು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಸಹಾಯಕ ಉಪಪ್ರಬಂಧಕ ನಿತ್ಯಾನಂದ ಶೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.