ಉಡುಪಿ, ಜೂ. 25: ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿಜಿಕೆ ರಂಗಪುರಸ್ಕಾರ’ -2024 ಕ್ಕೆ ಮಂಗಳೂರು ಜಿಲ್ಲೆಯಿಂದ ನಾಟಕಕಾರ ನಿರ್ದೇಶಕ ಸಂಘಟಕ ಶಶಿರಾಜ್ ಕಾವೂರು ಆಯ್ಕೆಯಾಗಿರುತ್ತಾರೆ. ಇವರು ವೃತ್ತಿಯಲ್ಲಿ ನ್ಯಾಯವಾದಿ. ಪ್ರವೃತ್ತಿಯಲ್ಲಿ ನಾಟಕಕಾರ, ನಟ, ಸಂಘಟಕ ಮತ್ತು ಗೀತ ರಚನೆಕಾರ. ಏಕಾದಶಾನನ, ಬರ್ಬರೀಕ, ನೆಮ್ಮದಿ ಅಪಾರ್ಟ್‌ಮೆಂಟ್ ಫ್ಲಾಟ್ ನಂಬರ್ 252, ಐಸಿಯು, ಸರದಾರನ ಸ್ವಗತ, ಸಂಪಿಗೆನಗರ ಪೋಲೀಸ್ ಸ್ಟೇಶನ್, ದಾಟ್ಸ್ ಆಲ್ ಯುವರ್ ಆನರ್, ಮಿನುಗೆಲೆ ಮಿನುಗೆಲೆ ನಕ್ಷತ್ರ, ವ್ಯೂಹ, ಮರಗಿಡಬಳ್ಳಿ, ಪರಶುರಾಮ, ಛತ್ರಪತಿ ಶಿವಾಜಿ, ನೆಮ್ಮದಿ ಅಪಾರ್ಟ್‌ಮೆಂಟ್ ಬ್ಲಾಕ್ ಬಿ ಇತ್ಯಾದಿ ನಾಟಕಗಳನ್ನು ಬರೆದಿದ್ದಾರೆ.
ಪೊಸ ಒಸರ್, ಪರ್ಂದ್ ಪೆಲಕಾಯಿ, ಬರ್ಬರೀಕ, ಪಿಲಿತ ಪಂಜ, ಬಿಂಬದುಲಾಯಿದ ಬಿಂಬ, ಮಾಲೆ ಪಟಾಕಿ, ಪುದ್ದು ಕೊಡ್ತರ್ ಇತ್ಯಾದಿ ತುಳು ಪುಸ್ತಕಗಳನ್ನು ರಚಿಸಿದ್ದಾರೆ.
ಧಾರವಾಡದ ದ.ರಾ.ಬೇಂದ್ರೆ ಪ್ರಶಸ್ತಿ, ಫ.ಶಿ.ಭಾಂಡಗೆ ಪ್ರಶಸ್ತಿ, ರಂಗಭೂಮಿ ನಾಟಕ ರಚನಾ ಪ್ರಶಸ್ತಿ, ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎರಡು ಸಲ ರತ್ನವರ್ಮ ಹೆಗ್ಗಡೆ ನಾಟಕ ರಚನಾ ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.