ಉಡುಪಿ, ಜೂ.15: ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅನಧೀಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ಈ ಬಗ್ಗೆ ಸಂಬಂಧಿಸಿದ ಹತ್ತಿರದ ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಅಂದ ಅವರು, ಅಧಿಕೃತ ಜಾನುವಾರು ಸಾಗಾಣಿಕೆ ಮಾಡಬೇಕಾದ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಸದ್ರಿ ವ್ಯಾಪ್ತಿಯ ಪೋಲಿಸ್ ಠಾಣೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು. ಅನಧಿಕೃತ ಜಾನುವಾರು ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸುವಂತೆ ಹಾಗೂ ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿಗಳು ಸನ್ನದ್ಧರಾಗಿರಬೇಕು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ನಡೆಯಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರರುಗಳು ಶಾಂತಿ ಸಭೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಅರುಣ್ ಕೆ ಮಾತನಾಡಿ, ಜಿಲ್ಲಾದ್ಯಂತ ತಪಾಸಣಾ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಸದ್ರಿ ಕೇಂದ್ರಗಳು ಜಾನುವಾರು ಸಾಗಾಣಿಕೆ ಮಾಡುವ ಕುರಿತು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಜಾನುವಾರು ಸಾಗಣಿಕೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುದು ಎಂದರು. ಸಭೆಯಲ್ಲಿ ಎಎಸ್‌ಪಿ ಸಿದ್ದಲಿಂಗಪ್ಪ, ಪೌರಾಯುಕ್ತ ರಾಯಪ್ಪ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.