ನವದೆಹಲಿ, ಜೂ.7: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಭಾನುವಾರ ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಷ್ಟ್ರಪತಿಗಳು ನರೇಂದ್ರ ಮೋದಿ ಮತ್ತು ಅವರ ನೂತನ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಎನ್ಡಿಎ ನಿಯೋಗವೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಪತ್ರವನ್ನು ಸಲ್ಲಿಸಿತ್ತು. ಎನ್ಡಿಎ ಘಟಕದ ಪಕ್ಷಗಳ ಬೆಂಬಲ ಪತ್ರವನ್ನೂ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು.
ರಾಷ್ಟ್ರಪತಿ ಭವನದ ಹೊರಗೆ ಮಾತನಾಡಿದ ನರೇಂದ್ರ ಮೋದಿ, ಎನ್ಡಿಎ ಪ್ರಬಲ, ಸ್ಥಿರ ಮತ್ತು ಬೆಳವಣಿಗೆ ಆಧಾರಿತ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು. ರಾಷ್ಟ್ರಪತಿ ಭವನವು ಉಳಿದ ವಿವರಗಳನ್ನು ಈಗಲೇ ರೂಪಿಸಲಿದ್ದು, ಅಷ್ಟರೊಳಗೆ ಮಂತ್ರಿಮಂಡಲದ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು. ಜನರು ಎನ್ಡಿಎ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದಾರೆ ಮತ್ತು ಈ 18 ನೇ ಲೋಕಸಭೆಯು ಹೊಸ ಮತ್ತು ಯುವ ಶಕ್ತಿಯ ಸದನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮ ಸರ್ಕಾರ ದೇಶದ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂದರು. ಸ್ಥಿರ ಸರ್ಕಾರವು ಭಾರತ ಮತ್ತು ಅದರ ಆರ್ಥಿಕತೆ ಮತ್ತು ಯುವಜನತೆಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ರಾಷ್ಟ್ರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಕಟಿಬದ್ಧವಾಗಿರಲಿದೆ ಎಂದು ಭರವಸೆ ನೀಡಿದರು.