ನವದೆಹಲಿ, ಜೂ.2: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬಂದಿದ್ದು, ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಮತ್ತೊಂದು ಅವಧಿಯನ್ನು ಪಡೆದುಕೊಂಡಿದೆ. ಎರಡು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಿತು. ಅರುಣಾಚಲ ಪ್ರದೇಶದ 60 ಸ್ಥಾನಗಳಿಗೆ ಮತ್ತು ಸಿಕ್ಕಿಂನ 32 ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದ ಲೋಕಸಭಾ ಚುನಾವಣೆಯೊಂದಿಗೆ ಏಕಕಾಲದಲ್ಲಿ ಮತದಾನ ನಡೆಯಿತು. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಮಾಜಿ ಕೇಂದ್ರ ಸಚಿವ ನಿನೊಂಗ್ ಎರಿಂಗ್, ಪಕ್ಷದ ನಾಯಕರಾದ ಡಾ. ಮಹೇಶ್ ಚಾಯ್, ತೈ ನಿಕಿಯೊ, ಹೊಮ್ಚುನ್ ನ್ಗಮ್ಡಮ್, ವಾಂಗ್ಲಿಂಗ್ ಲೋವಾಂಗ್‌ಡಾಂಗ್, ತ್ಸೆರಿಂಗ್ ಲಾಮು ಮತ್ತು ಚಕತ್ ಅಬೋಹ್ ಬಿಜೆಪಿಯಿಂದ ಕೆಲವು ಪ್ರಮುಖ ವಿಜೇತರು.
ಸಿಕ್ಕಿಂನಲ್ಲಿ, ಎಲ್ಲಾ 32 ಸ್ಥಾನಗಳಿಗೆ ಪ್ರಕಟವಾದ ಫಲಿತಾಂಶಗಳಲ್ಲಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 31 ಸ್ಥಾನಗಳನ್ನು ಗೆದ್ದಿದೆ. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಕೇವಲ ಒಂದು ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಮತ್ತು ಎಸ್.ಕೆ.ಎಂ ಅಧ್ಯಕ್ಷ ಪ್ರೇಮ್ ಸಿಂಗ್ ತಮಾಂಗ್ ಅವರು ರೆನಾಕ್ ಮತ್ತು ಸೊರೆಂಗ್ ಚಕುಂಗ್ ಕ್ಷೇತ್ರಗಳಿಂದ ಗೆದ್ದಿದ್ದಾರೆ. ಎಸ್‌ಕೆಎಂ ಅಭ್ಯರ್ಥಿ ಮತ್ತು ರಾಜ್ಯ ವಿಧಾನಸಭಾ ಸ್ಪೀಕರ್ ಅರುಣ್ ಕುಮಾರ್ ಉಪ್ರೆಟ್ಟಿ ಅವರು ಅರಿತಂಗ್ ಕ್ಷೇತ್ರದಿಂದ ಗೆದ್ದಿದ್ದಾರೆ. ಶ್ಯಾರಿ ಕ್ಷೇತ್ರದಿಂದ ಎಸ್‌ಕೆಎಂನ ಕುಂಗಾ ನಿಮಾ ಲೆಪ್ಚಾ ವಿರುದ್ಧ ಎಸ್‌ಡಿಎಫ್ ಅಭ್ಯರ್ಥಿ ತೇನ್ಸಿಂಗ್ ನಾರ್ಬು ಲಮ್ತಾ ಗೆಲುವು ಸಾಧಿಸಿದ್ದಾರೆ.