ಮಂಗಳೂರು, ಮೇ 27: ಕ್ರೀಡಾಕೂಟ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕನಿಷ್ಠ ದಿನದ ಒಂದು ಗಂಟೆಯನ್ನಾದರೂ ಕ್ರೀಡೆಗೆ ಮೀಸಲಿಟ್ಟು ಜೀವನಪೂರ್ತಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ರಮೇಶ್ ಎಚ್. ಎನ್. ಹೇಳಿದರು. ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ೨೦೨೩-೨೪ ನೇ ವಾರ್ಷಿಕ ಕ್ರೀಡಾಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಕ್ರೀಡೆ ಯಾವಾಗಲೂ ನಮ್ಮಲ್ಲಿ ಬಾಂಧವ್ಯವನ್ನು ಬೆಳೆಸಬೇಕೆ ಹೊರತು ದ್ವೇಷವನ್ನಲ್ಲ. ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಹಾರೈಸಿದರು.
ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನದೊಂದಿಗೆ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆಗೈದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ, ಚಂದ್ರಕಾಂತ್, ಅಮಿಷ, ವೈಶಿಕ, ಸಾಕ್ಷ, ಕಿರಣ್, ಸಾರ್ಥಕ್, ಲಾವಣ್ಯ, ಕೌಶಿಕ್, ಶ್ರೀನಾಥ್, ಸಂಜನ ಇವರು ಕ್ರೀಡಾಜ್ಯೋತಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಕ್ರೀಡಾ ಕಾರ್ಯದರ್ಶಿಯಾದ ಜ್ಞಾನೇಶ್ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಸ್ನಾತಕ ವಿಭಾಗದ ಸಂಯೋಜಕಿ ಡಾ. ವಸಂತಿ ಪಿ., ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ನಾಗಪ್ಪ ಗೌಡ ಕೆ., ಡಾ. ನವೀನ್, ಡಾ. ಜೆಫ್ರಿ ರೋಡ್ರಿಗಸ್, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶುಭ ಕೆ.ಎಚ್., ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಥಸಂಚಲನದಲ್ಲಿ ದ್ವಿತೀಯ ಬಿ.ಎಸ್ಸಿ ಪ್ರಥಮ ಸ್ಥಾನ, ಪ್ರಥಮ ಬಿ.ಎಸ್ಸಿ ದ್ವಿತೀಯ ಸ್ಥಾನ ಹಾಗೂ ಪ್ರಥಮ ಬಿ.ಕಾಂ-ಬಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸ್ನಾತಕ, ಸ್ನಾತಕೋತ್ತರ ಹಾಗೂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಉಪನ್ಯಾಸಕರುಗಳಿಗೆ ಓಟದ ಹಾಗೂ ನಡೆಯುವ ಸ್ಪರ್ಧೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣಾ ಆಳ್ವ ಸ್ವಾಗತಿಸಿ, ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ವಂದಿಸಿ, ವಿರೂಪಾಕ್ಷ ಹಾಗೂ ಶ್ರುತನ್ ನಿರೂಪಿಸಿದರು.