ಕಟಪಾಡಿ, ಮೇ 26: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಟಾಟಾ ಸಂಸ್ಥೆಯ ವತಿಯಿಂದ ನೀಡಲಾದ 9 ಶಾಲಾ ವಾಹನಗಳ ಹಸ್ತಾಂತರ ಕಾರ್ಯಕ್ರಮ ಪೇಜಾವರ ಮಠಾಧೀಶ, ಹಾಗೂ ಆನಂದತೀರ್ಥ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ನಡೆಯಿತು. ಕೆಲವು ನೂರರಲ್ಲಿ ಆರಂಭವಾದ ಆನಂದತೀರ್ಥ ಶಾಲೆ ಇಂದು ಸುಮಾರು ಎರಡು ಸಾವಿರದ ಎಂಟುನೂರು ವಿದ್ಯಾರ್ಥಿಗಳಿರುವ ಸುಸಜ್ಜಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಕೆ ಜಿ ಯಿಂದ ಪಿ.ಜಿ ವರೇಗೆ ಒಂದೇ ಸೂರನಡಿಯಲ್ಲಿ ಶಿಕ್ಷಣ ಸಿಗುವ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆಯೂ ಒಂದು ಎಂಬುದೇ ಹೆಮ್ಮಯ ವಿಚಾರ ಎಂದರು. ಈ ಬೆಳವಣಿಗೆಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಶಿಕ್ಷಕರು, ಪೋಷಕರು, ಶಿಕ್ಷಕೇತರ ವೃಂದದವರ ನಿಸ್ವಾರ್ಥ ಸೇವೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಇಲ್ಲಿರುವ ಪ್ರತಿಯೊಬ್ಬರ ಜವಾಜ್ದಾರಿಯೂ ಹೆಚ್ಚಾಗುತ್ತದೆ. ಎಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ನಮ್ಮ ಸಂಸ್ಥೆ ಉದಾಹರಣೆ ಎಂದು ಪೇಜಾವರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ದೇಶದ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ನಮ್ಮ ವಿದ್ಯಾಸಂಸ್ಥೆಗಳಿಂದ ಉತ್ತಮ ಪ್ರಜೆಗಳು ಮೂಡಿ ಬಂದು ದೇಶಕಟ್ಟುವ ಕಾಯಕದಲ್ಲಿ ತೊಡಗಿಕ್ಕೊಳ್ಳಲಿ ಎಂದು ಆಶೀರ್ವದಿಸಿದರು.
ಆಡಳಿತ ಮಂಡಳಿ ಕಾರ್ಯಧ್ಯಕ್ಷ ನಾಗರಾಜ್ ಬಲ್ಲಾಳ್, ಉಪಾಧ್ಯಕ್ಷ ಶ್ರೀಹರಿ ಭಟ್, ಖಜಾಂಜಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯರಾದ ಸುದರ್ಶನ್ ರಾವ್, ಉಡುಪಿ ರೀಜನಲ್ ಆಫೀಸ್ ಇಲ್ಲಿನ ಕರ್ನಾಟಕ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ್ ಕೆ. ಕರ್ನಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಪ್ರದೀಪ್ ಕುಮಾರ್, ಬಂಟಕಲ್ ಬ್ರಾಂಚ್ ಮ್ಯಾನೇಜರ್ ವಿಘ್ನೇಶ್ ಉಡುಪ, ಪ್ರಾಂಶುಪಾಲೆ ಡಾ. ಗೀತಾ ಎಸ್. ಕೋಟ್ಯಾನ್, ವಿಜಯ ಪಿ. ರಾವ್, ಶಾಲಾ ವಾಹನಗಳ ಮೇಲ್ವಿಚಾರಕ ಮಂಜುನಾಥ್ ಹೊಳ್ಳ, ಮಂಗಳೂರು ಟಾಟಾ ಮೋಟಾರ್ಸ್ ಹೆಡ್ ರವಿರಾಜ್, ಸೇಲ್ಸ್ ಮ್ಯಾನೇಜರ್ ಸೃಜನ್ ಕುಮಾರ್ ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಸುನಾಲಿನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕಿ ವಿಜೇತಾ ವಂದಿಸಿದರು.