ಬ್ರಹ್ಮಾವರ, ಮೇ 24: ಬಿಲ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂಡಾರು ಚಕ್ಕಾರುಬೆಟ್ಟುವಿನ ನಿವಾಸಿ ದಿವ್ಯ ಕುಲಾಲ್ ಇವರಿಗೆ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್‌ನ ಪ್ರಾಯೋಜಕತ್ವದಲ್ಲಿ ಮತ್ತು ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಇವರ ಸಹಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಟೈಲರಿಂಗ್ ಕೊಠಡಿ ಉದ್ಘಾಟನಾ ಸಮಾರಂಭವು ವಂಡಾರು ಚಕ್ಕಾರುಬೆಟ್ಟಿನಲ್ಲಿ ನಡೆಯಿತು. ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಬಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್‌ನ ಎಮ್ ರೊನಾಲ್ಡ್ ಡಿ ಸೋಜಾ ಕಟ್ಟಡದ ನಾಮಫಲಕವನ್ನು ಸಾಂಕೇತಿಕವಾಗಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಸಮಾಜದಲ್ಲಿ ಬಡವರಿಗೆ, ನೊಂದವರಿಗೆ, ಇಂತಹ ವಿಶೇಷಚೇತನ ಪ್ರತಿಭಾನ್ವಿತರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಗ್ರಾಮೀಣ ಪ್ರದೇಶದಲ್ಲಿರುವ ಇಂತಹ ಪ್ರತಿಭೆಗಳನ್ನು ಗುರುತಿಸಿ ಅವರ ಬದುಕಿಗೆ ನೆರವಾಗೋಣ ಎಂದರು. ಸೆಲ್ಕೊ ಸೊಲಾರ್‌ನ ಏರಿಯಾ ಮ್ಯಾನೇಜರ್ ಸುರೇಶ್ ನಾಯ್ಕ ಮಾತನಾಡಿ, ಸೆಲ್ಕೊ ಸೋಲಾರ್ ಸಂಸ್ಥೆಯು ವಿದ್ಯುತ್ ಸಂಪರ್ಕಕ್ಕೆ ಅಸಾಧ್ಯವಿರುವ ಕುಗ್ರಾಮಗಳಲ್ಲಿನ ಅದೆಷ್ಟೊ ಮನೆಗಳಿಗೆ ಸೋಲಾರ್ ಸಂಪರ್ಕದ ಮೂಲಕ ಬೆಳಕನ್ನು ನೀಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಶಾಲೆಗಳಿಗೆ ಸೋಲಾರ್ ಅಳವಡಿಸುವುದರ ಮೂಲಕ ನಮ್ಮ ಸಂಸ್ಥೆ ಜನ ಮೆಚ್ಚುಗೆಗಳಿಸಿದೆ ಎಂದರು. ವೇದಿಕೆಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಸಾಹಿತಿ ಮಂಜುನಾಥ ಕಾಮತ್ ಹಾಲಾಡಿ, ಹಾಲಾಡಿ ಸರಕಾರಿ ಪೌಢ ಶಾಲೆಯ ಮುಖ್ಯ ಶಿಕ್ಷಕಿ ರೋಷನ್ ಬೀಬಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೆಂಕಪ್ಪ ಕುಲಾಲ್ ಅನಿಸಿಕೆ ಹಂಚಿಕೊಂಡರು, ಪ್ರಸನ್ನ ಕುಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷ ನಾರಾಯಣ ಟಿ. ಮತ್ತು ಸದಸ್ಯರು, ಶಂಕರನಾರಾಯಣ ಜೆಸಿಐನ ಪೂರ್ವಾಧ್ಯಕ್ಷ ಗುರುದತ್ತ ಶೇಟ್, ಉದ್ಯಮಿ ರಾಜೀವ ಕುಲಾಲ್ ಹೈಕಾಡಿ, ದಿನೇಶ ಕುಲಾಲ ಹಾಲಾಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸ್ವಾತಿ ಕುಲಾಲ್ ವಂಡಾರು ಸ್ವಾಗತಿಸಿ, ಆಶಾ ರಾಜೀವ ಕುಲಾಲ ವಂದಿಸಿದರು. ಲೇಖಕ ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.