ಕೋಟ, ಮೇ 23: ಯುವ ಸಮುದಾಯ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು, ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಬ್ರಹ್ಮಾವರ, ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರಸ್ತುತ ವಿದ್ಯಾಮಾನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ, ಪರಿಸರದ ರಸ್ತೆಗಳಲ್ಲಿ ತ್ಯಾಜ್ಯದ ಕೊಂಪೆಯಾಗುತ್ತಿರುವುದು. ಹೊಳೆ, ತೊರೆ, ಸಮುದ್ರದಲ್ಲಿ ತ್ಯಾಜ್ಯಗಳು ಲೀನಗೊಂಡು ಮಲಿನಗೊಳ್ಳುತ್ತಿರುವ ಬಗ್ಗೆ ತಾಪಮಾನದಲ್ಲಿ ವಿಪರೀತ ಏರಿಕೆಯ ಬಗ್ಗೆ ಸವಿವರವಾಗಿ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೆ ಕಾಡು ಕಡಿದು ಕಾಂಕ್ರೀಟ್ ಕಾಡು ಸೃಷ್ಟಿಸಿ, ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಗೊಳ್ಳುತ್ತಿರುವುದಕ್ಕೆ ಪರಿಹಾರವಾಗಿ ಮನೆ ಮನೆಯಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡನೆಟ್ಟು ಪೋಷಿಸುವ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಆಧುನಿಕ ಕಾಲಘಟ್ಟದಲ್ಲಿ ಕುಡಿಯುವ ನೀರಿನ ಆಹಾಕಾರ, ಅಂತರ್ಜಲ ಮಟ್ಟ ದಯನೀಯ ಸ್ಥಿತಿ ತಲುಪಿರುವುದು ಹಾಗೆ ಮಳೆಗಾಲದಲ್ಲಿ ಮಳೆನೀರು ಕೊಯ್ಲು ಅನುಷ್ಠಾನ, ನೀರು ಮಿತವಾಗಿ ಬಳಸುವ ಕುರಿತು ಸಮಗ್ರ ಮಾಹಿತಿ, ಮಕ್ಕಳ ಆರೋಗ್ಯದಲ್ಲಿ ಜಂಗ್‌ಪುಡ್ ಹಾನಿಕರ, ಮೊಬೈಲ್ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಿಕ್ಷಣ ತಜ್ಞ ಗಣೇಶ್ ಜಿ ಚಲ್ಲೆಮಕ್ಕಿ, ಅರಿವು ಗ್ರಂಥಾಲಯದ ಜ್ಯೋತಿ, ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್, ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಉಪಸ್ಥಿತರಿದ್ದರು.