ಕೋಟ, ಮೇ 23: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಾಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಹೇಳಿದರು. ಕೋಟ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟ, ಕೋಟ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಒಂದು ವಾರಗಳ ಸ್ವಉದ್ಯೋಗ ಎಂಬ್ರಾಯ್ಡರಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಸ್ತು, ಶ್ರದ್ಧೆ ಇದ್ದರೆ ಬದುಕಿನಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ. ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯವಸ್ಥೆಯಲ್ಲಿ ತಮ್ಮ ಸ್ವಉದ್ಯೋಗದಿಂದ ಸೃಷ್ಟಿಯಾದ ವಸ್ತುವನ್ನು ಮಾರ್ಕೆಟಿಂಗ್ ಸುಲಭವಾಗಿ ಮಾಡಬಹುದು ಎಂದರು. ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಸಭಾಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾಗಿ ಆರತಿರಾಜ್ ಭಾಗವಹಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟದ ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಬಂಧಕಿ ಸಹನಾ, ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕೃತಿ ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಭಾರತಿ ಸ್ವಾಗತಿಸಿ, ಮಾಜಿ ಅಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿದರು. ಸಂಜೀವಿನಿ ಒಕ್ಕೂಟದ ಲಲಿತಾ ಪೂಜಾರಿ ವಂದಿಸಿದರು. ಎಂಬಿಕೆ ಪ್ರೇಮ ಸಹಕರಿಸಿದರು.