ಕೋಟ, ಮೇ 19: ರೈತರ ದುಸ್ಥಿತಿಗೆ ಸರಕಾರದ ಅವೈಜ್ಞಾನಿಕ ನಿಯಮಗಳೇ ಕಾರಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ನಿರ್ಧರಿಸುವುದು ಎಸಿ ರೋಮ್‌ನಲ್ಲಿ ಕುಳಿತವರು ಎಂದು ಕೋಟತಟ್ಟು ಪಡುಕರೆಯ ಹಿರಿಯ ಕೃಷಿಕ ಶಿವಮೂರ್ತಿ ಕೆ ರೈತ ಸಮುದಾಯದ ನೋವನ್ನು ವ್ಯಕ್ತಪಡಿಸಿದರು. ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ೩೫ನೇ ಮಾಲಿಕೆ ಕಾರ್ಯಕ್ರಮದಲ್ಲಿ ಪಾರಂಪಳ್ಳಿ ರಮೇಶ್ ಹೇರ್ಳೆ ಇವರನ್ನು ಗೌರವಿಸಿ ಮಾತನಾಡಿದರು. ಸರಕಾರ ಮಾಡಬೇಕಾದ ಕಾರ್ಯಕ್ರಮ ಪಂಚವರ್ಣ ಹಾಗೂ ಇತರ ಸಂಸ್ಥೆಗಳು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು. ಪಾರಂಪಳ್ಳಿ ಪರಿಸರದ ಹಿರಿಯ ಕೃಷಿಕರಾದ ರಮೇಶ್ ಹೇರ್ಳೆ ದಂಪತಿಗಳನ್ನು ಕೃಷಿ ಪರಿಕರ, ಗಿಡ ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಕೃಷಿ ಸಂಘಟನೆಯ ಅಧ್ಯಕ್ಷ ರಾಮಕೃಷ್ಣ ಶರ್ಮ ಕೃಷಿ ಪದ್ದತಿಯ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಅನುಸೂಯ ಹೇರ್ಳೆ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಜಯರಾಮ್ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಾರಂಪಳ್ಳಿ ಪ್ರಗತಿಪರ ಕೃಷಿಕ ರಘು ಮಧ್ಯಸ್ಥ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಮಾಜಿ ಅಧ್ಯಕ್ಷೆ ಜಾನ್ಹವಿ ಹೇರ್ಳೆ, ವನೀತಾ ಉಪಾಧ್ಯ, ಮಹಿಳಾ ವೇದಿಕೆ ಸಾಲಿಗ್ರಾಮ ಇದರ ಭಾರತಿ ಹೇರ್ಳೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಸನ್ಮಾನ ಪತ್ರವನ್ನು ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ವಾಚಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.