ಉಡುಪಿ, ಮೇ 16: ಡೆಂಗ್ಯೂ ಮಲೇರಿಯಾ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಮಾನವ ಸರಪಳಿ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ನಗರ ಸಭೆ ಉಡುಪಿ, ವಿದ್ಯಾರತ್ನ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್, ನ್ಯೂ ಸಿಟಿ ನರ್ಸಿಂಗ್ ಕಾಲೇಜ್, ಮಿತ್ರ ಸ್ಕೂಲ್ ಆಫ್ ನರ್ಸಿಂಗ್, ಎಲ್.ಎಮ್.ಹೆಚ್ ಸ್ಕೂಲ್ ಆಫ್ ನರ್ಸಿಂಗ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಾಗೂ ವಿಶ್ವ ಮಲೇರಿಯಾ ದಿನಾಚರಣೆಯ ಹಿನ್ನಲೆ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು ಜಾಥಾವು ಬೋರ್ಡ್ ಹೈಸ್ಕೂಲ್ ನಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪುರಭವನದಲ್ಲಿ ಸಮಾರೋಪಗೊಂಡಿತು. ಜಾಥಾವನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಉದ್ಘಾಟಿಸಿ ಮಾತನಾಡಿ, ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಅತೀ ಮುಖ್ಯವಾಗಿದ್ದು ಈ ರೋಗಗಳಿಂದ ಆಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದಲೇ ಜಾಥಾವನ್ನು ಕೈಗೊಳ್ಳಲಾಗಿದೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಮೈತುಂಬಾ ಬಟ್ಟೆಗಳನ್ನು ಧರಿಸುವುದು, ಮಲಗುವಾಗ ಸೊಳ್ಳೆಪರದೆ ಬಳಸಬೇಕು ಎಂದು ಕರೆನೀಡಿದರು.
ಜನಸಾಮಾನ್ಯರಲ್ಲಿ ಡೆಂಗ್ಯೂ ಹಾಗೂ ಮಲೇರಿಯದಂತೆಯೇ ಸಾಂಕ್ರಮಿಕ ರೋಗದ ಲಕ್ಷಣ ಹಾಗೂ ಅದರ ನಿಯಂತ್ರಣ ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ನೀಡಬೇಕು ಎಂದರು.
ಜಾಥಾದಲ್ಲಿ ನರ್ಸಿಂಗ್ ಕಾಲೇಜ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪ್ರಾಧ್ಯಾಪಕರು, ಆಶಾ ಕಾರ್ಯಕರ್ತೆಯರು ಭಾಗವಹಿಸಿ ಡೆಂಗ್ಯೂ ಮತ್ತು ಮಲೇರಿಯ ರೋಗ ನಿಯಂತ್ರಣ ಕುರಿತು ಘೋಷಣೆಗಳನ್ನು ಕೂಗುವುದರ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ ಪ್ರಶಾಂತ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಐ.ಪಿ ಗಡಾದ, ಪೌರಾಯುಕ್ತ ರಾಯಪ್ಪ, ಎಂಟಾಮೋಲಜಿಸ್ಟ್, ಮುಕ್ತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ್, ವಸಂತ್, ರಾಮಚಂದ್ರ ಹಾಗೂ ನರ್ಸಿಂಗ್ ಕಾಲೇಜುಗಳ ಪ್ರಾಧ್ಯಾಪಕ ವೃಂದದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಸ collect ಮಾಡಲಿಕ್ಕೆ ಯಾರೂ ಬರುತ್ತಿಲ್ಲ… ಒಂದು ತಿಂಗಳಾಯಿತು… Dalima ಲೇಔಟ್ kannarpady