ಕೋಟ, ಮೇ 16: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ಪಾಂಡೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಅಭಿಪ್ರಾಯಪಟ್ಟರು. ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಇವರ ಸಹಯೋಗದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು. ಸರಕಾರ ಮಕ್ಕಳ ಬೇಸಿಗೆ ರಜೆಗೆ ಪೂರಕವಾದ ವಾತಾವರಣವನ್ನು ಶಿಬಿರದ ಮೂಲಕ ನೀಡುತ್ತಿದೆ. ಮನೆಯಲ್ಲೇ ಕಾಲಕಳೆಯುವುದಕ್ಕಿಂತ ಶಿಬಿರದ ಮೂಲಕ ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವಂತಾಗುತ್ತದೆ. ಈ ದಿಸೆಯಲ್ಲಿ ಇಲ್ಲಿನ ಶಿಬಿರ ಮತ್ತಷ್ಟು ವೈವಿಧ್ಯತೆಯ ತಾಣವಾಗಿ ಮೂಡಿಬರಲಿ ಎಂದರು. ಶಿಬಿರವನ್ನು ಶಿಬಿರಾರ್ಥಿಗಳಿಂದ ಉದ್ಘಾಟಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಸಂಜೀವಿನಿ ಮುಖ್ಯ ಬರಹಗಾರ ಉಷಾ ಗಣೇಶ, ಸಂಪನ್ಮೂಲ ವ್ಯಕ್ತಿಯಾಗಿ ಜ್ಞಾನೇಶ್ವರಿ ಉಡುಪ, ಉಪಸ್ಥಿತರಿದ್ದರು. ಮಕ್ಕಳು ಕವನ ರಚನೆ, ಚುಕ್ಕಿ ರಂಗೋಲಿ, ಉಲ್ಲನ್ ಕ್ರಾಫ್ಟ್ ಮಾಡುವುದು ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಸ್ವಾಗತಿಸಿ ನಿರೂಪಿಸಿದರು. ಪಂಚಾಯತ್ ಕಾರ್ಯದರ್ಶಿ ವಿಜಯ ಭಂಡಾರಿ ವಂದಿಸಿದರು.