ಬೆಂಗಳೂರು, ಮೇ 15: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರೇಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತ ಹಾಗೂ ದ್ವಿತೀಯ ರೇಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಇಬ್ಬರು ಮಕ್ಕಳ ಭವಿಷ್ಯ ಉಜ್ವಲವಾಗಲಿ. ಅಮೋಘ ಸಾಧನೆ ಮಾಡಿದ ಈ ವಿದ್ಯಾರ್ಥಿಗಳ ಮುಂದಿನ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ನೀಡುತ್ತಿದ್ದೇನೆ. ಗ್ರಾಮೀಣ ಮಕ್ಕಳು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಲಿ. ಈ ಮಕ್ಕಳು ಓದಿದ ಶಾಲೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿಯಾಗಲಿ ಎಂದು ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.