ಮಣಿಪಾಲ, ಮೇ 14: ಮಾಹೆ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸ್ವಯಂಸೇವಕರಿಗೆ ಮಣಿಪಾಲದಲ್ಲಿ ಮೇ 13 ರಿಂದ ಮೇ 20 ರವರೆಗೆ ಆಯೋಜಿಸಿದ್ದ ವಿಶೇಷ ಶಿಬಿರವನ್ನು ಎನ್ಎಸ್ಎಸ್ ನಿರ್ದೇಶನಾಲಯ ಬೆಂಗಳೂರು ಯುವ ಅಧಿಕಾರಿ ಶ್ರೀಧರ್ ಜಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಎನ್ಎಸ್ಎಸ್ ಮಾಜಿ ಕಾರ್ಯಕ್ರಮ ಸಮನ್ವಯ ಅಧಿಕಾರಿ ಡಾ. ಗಣನಾಥ್ ಎಕ್ಕಾರ್ ವಿದ್ಯಾರ್ಥಿ ಸಮೂಹವನ್ನು ಪರಿಸರ ಸೇವೆಗೆ ಪ್ರೇರೇಪಿಸುವ ಕುರಿತು ಮಾತನಾಡಿದರು. ಎನ್ಎಸ್ಎಸ್ ಒಂದು ಅನುಭವವಾಗಿದ್ದು, ಇದು ಅನುಭವದ ಕಲಿಕೆಯನ್ನು ಹೊಂದಲು ಮತ್ತು ನಾಯಕತ್ವದ ಅಭಿವೃದ್ಧಿ ಮತ್ತು ಜ್ಞಾನವನ್ನು ಗಳಿಸಲು ಒಂದು ಅದ್ಭುತ ಅವಕಾಶವಾಗಿದೆ ಎಂದು ಮುಖ್ಯ ಅತಿಥಿ ಎಂಐಟಿ ಮಣಿಪಾಲ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಹೇಳಿದರು.
ಆಸರೆ ಅಧ್ಯಕ್ಷರಾದ ಕೆ ಎಸ್ ಜೈ ವಿಟ್ಟಲ್ ಅವರನ್ನು ಮಾನಸಿಕ ಅಸ್ವಸ್ಥ ರೋಗಿಗಳಿಗೆ ಪ್ರಾಮಾಣಿಕವಾಗಿ ಸಮರ್ಪಿತ ಕೆಲಸಕ್ಕಾಗಿ ಸನ್ಮಾನಿಸಲಾಯಿತು. ಅಭಿವೃದ್ಧಿ ಮತ್ತು ಯೋಜನೆ ಸಹನಿರ್ದೇಶಕ ಡಾ.ರಾಮಚಂದ್ರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ಎಸ್ಎಸ್ ಕೈಗೊಳ್ಳುವ ಯಾವುದೇ ರಚನಾತ್ಮಕ ಚಟುವಟಿಕೆಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಡಾ. ಮದ್ದೋಡಿ ಸ್ವಾಗತಿಸಿ, ಪ್ರಾಗ್ಹ್ಯಾ ಡೋರಾ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಲಕ್ಷ್ಮಣ್ ರಾವ್, ಡಾ.ಪೂರ್ಣಿಮಾ ಭಾಗವತ್, ಡಾ.ಆಶಾ ಸಿ.ಎಸ್ ಉಪಸ್ಥಿತರಿದ್ದರು.