ಕೋಟ, ಮೇ 13: ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿ ನಿಲ್ಲಬೇಕು, ಆಗ ತಾವು ಕಲಿತ ಶಾಲೆಗೆ ಗುರುವಂದನೆಯಷ್ಟೇ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದು ಶಿಕ್ಷಣ ತಜ್ಞ ಚೆಲ್ಲಮಕ್ಕಿ ಗಣೇಶ್ ಜಿ ಹೇಳಿದರು. ಮಾಬುಕಳದ ಚೇತನ ಪ್ರೌಢ ಶಾಲೆಯಲ್ಲಿ 1993 ರಿಂದ 96 ರ ಇಸವಿಯ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ 2024 ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಶಾಲೆಯ ಏಳಿಗೆಗೆ ಹಳೆ ವಿದ್ಯಾರ್ಥಿಗಳ ಪಾತ್ರ ಗಣನೀಯವಾದದ್ದು. ಈ ದಿಸೆಯಲ್ಲಿ ಇಲ್ಲಿನ ಹಳೆ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಮೂಲಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆಗಿನ ಶಿಕ್ಷಣ ಪದ್ದತಿಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸಗಳಿವೆ ಎಂದರು.
ಹಿರಿಯ ನಿವೃತ್ತ ಶಿಕ್ಷಕರಾದ ವಿಘ್ನೇಶ್ವರ ಹೆಬ್ಬಾರ್, ಶಿಕ್ಷಕ ಸುರೇಂದ್ರ ವಾಗ್ಳೆ, ಚೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ಗಣೇಶ್ ಜಿ. ಇವರುಗಳಿಗೆ ಗುರುವಂದನೆ ಹಾಗೂ ಶಾಲಾ ಕ್ಲರ್ಕ್ ಶಂಕರ್ ಇವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ, ವಿಜಯ್ ಕುಮಾರ್, ಶ್ರೀಕರ, ಕಲಾವತಿ, ರೇಷ್ಮಾ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳು ಗುರುಗಳ ಶಿಕ್ಷಣದ ಬಗ್ಗೆ ಪ್ರಸ್ತುತ ತಮ್ಮ ಕಾರ್ಯಗಳ ಬಗ್ಗೆ ಸವಿವರವಾಗಿ ಅನಿಸಿಕೆಯನ್ನು ಹಂಚಿಕೊಂಡರು. ಹಳೆ ವಿದ್ಯಾರ್ಥಿ ಸುನಿತಾ ಸ್ವಾಗತಿಸಿದರು. ಶುಭ ಆಚಾರ್ ಕಾರ್ಯಕ್ರಮ ರೂಪಿಸಿದರು. ಹಳೆ ವಿದ್ಯಾರ್ಥಿ ರಾಜೇಶ್ ಕೆ.ವಿ ವಂದಿಸಿದರು.