ಅನೇಕ ನಿರೀಕ್ಷೆಯನ್ನಿಟ್ಟುಕೊಂಡು ಮದುವೆಯಾಗಿ ಬಂದ ಮದುಮಗಳು ಎರಡೇ ತಿಂಗಳಲ್ಲಿ ಜೀವನದಲ್ಲಿ ಬೇಸರಗೊಂಡಳು. ಏಕೆ ಹೀಗಾಯ್ತು?ಇದರ ಬಗ್ಗೆ ವಿಶ್ಲೇಷಿಸೋಣ. ಮದುವೆಗಿಂತ ಮುಂಚೆ ಅನೇಕ ಸಿನಿಮಾಗಳನ್ನು ನೋಡಿ ಭ್ರಮಾಲೋಕದಲ್ಲಿದ್ದ ಅವಳು, ಮದುವೆ ಎಂದರೆ ಸ್ವರ್ಗ ಗಂಡನೊಟ್ಟಿಗೆ ತಿರುಗುವುದು, ಹೋಟೆಲ್ ಫಿಲ್ಮ್ ಹೀಗೆ ಸುತ್ತುವುದು ಎಂದು ನಂಬಿ ಮದುವೆಯಾಗಿದ್ದಳು. ಮದುವೆಯಾದ ನಂತರ ಮನೆ ಕೆಲಸ, ಗಂಡನ, ಅತ್ತೆ ಮಾವನ ಜವಾಬ್ದಾರಿ. ಗಂಡನೊಟ್ಟಿಗೆ ಸಮಯ ಸಿಗುವುದು ಕಮ್ಮಿ ಎಂದು ಅರಿವಿಗೆ ಬಂತು. ಹೀಗೆ ಇರುವುದು ಇಷ್ಟವಿಲ್ಲ ಡಿವೋರ್ಸ್ ಬೇಕು ಎಂದು ಹಠ ಹಿಡಿದಳು. ಕಾರಣವಿಷ್ಟೇ, ಗಂಡನು ನನಗೆ ಪ್ರೀತಿಸುವುದಿಲ್ಲ, ಅತ್ತೆ ಮಾವನ ಕೆಲಸ ಮಾಡಿಕೊಂಡಿರಬೇಕು ಎಂದು.
ಅತ್ತೆ ಮಾವನವರು ಒಳ್ಳೆಯವರೇ. ಇವಳಿಗೆ ಹೊಂದಿಕೊಂಡು ಹೋದರು. ಆದರೆ ಸೀರಿಯಲ್ ಫಿಲಂ ಲೋಕದಲ್ಲಿ ಸದಾ ಕಾಲ ಕಳೆಯುತ್ತಿರುವ ಮದುಮಗಳು ಅದೇ ವಾಸ್ತವವೆಂದು ನಂಬಿಬಿಟ್ಟಿದಳು. ನಿಜ ಜೀವನವೇ ಬೇರೆ ಟಿವಿ ಫಿಲ್ಮ್ ಲೋಕವೇ ಬೇರೆ. ಅದು ಬರೀ ಮನೋರಂಜನೆಗೆ ಮಾತ್ರ. ಅದರಲ್ಲಿ ಎಲ್ಲವೂ ಸತ್ಯವಾಗಿರುವುದಿಲ್ಲ. ಅದರಲ್ಲಿ ತೋರಿಸುವಂತಹ ಅತಿ ಪ್ರೀತಿ ಫೇರಿ ಟೇಲ್ (fairy tale) ನ ನೆನಪು ಬರುತ್ತದೆ. ಯಾವ ಮನುಷ್ಯ ಕೂಡ 24 ಗಂಟೆಗಳ ಕಾಲ ಇಡೀ ಜೀವನ ಜಗಳವಾಡದೆ ಸಿಟ್ಟು ಬರದೇ ಇರಲಿಕ್ಕೆ ಸಾಧ್ಯವಾಗದು. ಆದ್ದರಿಂದ ಮೊದಲು ವಾಸ್ತವ ಏನು ಎಂದು ತಿಳಿಯುವುದು ಮುಖ್ಯ. ಸೀರಿಯಲ್ ನಲ್ಲಿದ್ದ ಹಾಗೆ ಗಂಡ ಪ್ರೀತಿಸಬೇಕಾದರೆ ಹೆಂಡತಿಯು ಕೂಡ ಆ ಸೀರಿಯಲ್ ನಲ್ಲಿ ತೋರಿಸಿದಂತಹ ಅತಿ ಒಳ್ಳೆಯವಳು ಆಗಿರಬೇಕು. ನಾವು ಗಂಡನಿಂದ ಅಥವಾ ಹೆಂಡತಿಯಿಂದ ನಿರೀಕ್ಷಿಸುತ್ತೇವೆ, ಆದರೆ ಅದೇ ರೀತಿ ಗಂಡನ ಅಥವಾ ಹೆಂಡತಿಯ ನಿರೀಕ್ಷೆಗಳಿಗೆ ಹೊಂದಿಕೊಂಡು ಹೋಗಬೇಕು. ಜೀವನದಲ್ಲಿ ಗಿವ್ ಅಂಡ್ ಟೇಕ್ ಪಾಲಿಸಿ ನಡೆಯುವುದು. ಬರಿ ಬೇರೆಯವರಿಂದ ನಿರೀಕ್ಷಿಸುವುದಲ್ಲ ನಾವು ಕೂಡ ಬೇರೆಯವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕು ನಿಜ ಅಲ್ಲವೇ?
ಇನ್ನೊಂದು ಉದಾಹರಣೆ ಅತ್ತೆಗೆ ಶುಚಿತ್ವದ ಗೀಳು. ಮದುವೆಯಾಗಿ ಬಂದಂತಹ ಸೊಸೆ ಅಷ್ಟು ಶುಚಿತ್ವವನ್ನು ಕಾಪಾಡಲ್ಲ. ಇಲ್ಲಿ ಅತ್ತೆಯಂತೆಯೇ ಸೊಸೆಯು ಇರಬೇಕು ಎಂದು ಅತ್ತೆ ಬಯಸುತ್ತಾರೆ. ಯಾವತ್ತಾದರೂ ಒಂದು ಚೂರು ಆ ಕಡೆ ಈ ಕಡೆ ಆದರೆ ಸಿಟ್ಟು ಬಂದುಬಿಡುತ್ತದೆ. ಸೊಸೆಯ ಗುಣವೇ ಬೇರೆ ವ್ಯಕ್ತಿಯೇ ಬೇರೆ ಎಂದು ಯೋಚಿಸುವುದಿಲ್ಲ. ಅತ್ತೆಗೆ ಅತಿ ಶುಚಿತ್ವ ಬಿಟ್ಟು ಬಿಡಿ ಹೇಳಿದರೆ ಅವರಿಗೆ ಬಿಡಲಿಕ್ಕೆ ಆಗುವುದೇ? ಅದೇ ರೀತಿ ಅಲ್ಲವೇ ಸೊಸೆಗೂ ಕೂಡ ತನ್ನ ಗುಣಗಳನ್ನು ಬಿಡಲು ಸಾಧ್ಯವಾಗುವುದಿಲ್ಲ. ಅದನ್ನು ನಾವು ಅರಿಯಬೇಕಷ್ಟೇ. ಬೇರೆಯವರ ಒತ್ತಾಯದಿಂದ ಯಾವತ್ತೂ ಯಾರು ಸುಧಾರಿಸುವುದಿಲ್ಲ. ನಮಗೆ ನಾವು ಸುಧಾರಿಸಬೇಕು ಎಂದು ಅರಿವಾದಾಗಷ್ಟೇ ಶ್ರಮ ಪಟ್ಟರೆ ಮಾತ್ರ ಸುಧಾರಣೆ ಸಾಧ್ಯ ಅಲ್ಲವೇ? ಇತರರ ಸ್ವಭಾವವನ್ನು ಒಪ್ಪಿಕೊಂಡು ಹೋಗಿ ಕೆಲವು ತಪ್ಪುಗಳಿದ್ದರೆ ಹೇಳಿ ತಿಳಿಸಿ. ಹೊಂದುಕೊಂಡು ಹೋಗದಿದ್ದರೆ ಅವರಷ್ಟಕ್ಕೆ ಬಿಟ್ಟುಬಿಡಿ. ನಮ್ಮ ತಪ್ಪನ್ನು ತಿದ್ದಿಕೊಂಡು ಹೋಗುವುದು ಜಾಣತನ. ಅದನ್ನೇ ದೊಡ್ಡ ಸಮಸ್ಯೆ ಎಂದು ಪರಿಗಣಿಸದೆ ಹೊಂದಿಕೊಂಡು ಹೋಗುವುದು ನಮ್ಮ ಕೆಲಸವಷ್ಟೇ. ನಾವು ಜೀವನವನ್ನು ಎಷ್ಟು ಕ್ಲಿಷ್ಟಕರ ಮಾಡುತ್ತೇವೆ ಎಂದರೆ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜೀವನವಿಡಿ ಒದ್ದಾಡುತ್ತೇವೆ. ಹೌದಲ್ಲವೇ?
ಜೀವನದಲ್ಲಿ ಹೊಂದಾಣಿಕೆ ಮುಖ್ಯ. ನೀವು ಹೊಂದಿಕೊಂಡು ಹೋಗಬೇಕು. ಅವರು ಕೂಡ ನಿಮ್ಮನ್ನು ಹೊಂದಿಕೊಂಡು ಹೋಗಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ, ಆದರೆ ಅತಿಯಾಗಿ ಎಲ್ಲದಕ್ಕೂ ಹೀಗೆ ಆಗಬೇಕು ಎಂದು ನಿರೀಕ್ಷಿಸದಿರಿ. ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು ಅನೇಕ ವರ್ಷಗಳು ಬೇಕಾಗುತ್ತದೆ. ಕೆಲವು ಗುಣಗಳ ಬಗ್ಗೆ ಮಾತ್ರ ಬೇಗನೆ ಅರ್ಥ ಮಾಡಿಕೊಳ್ಳಬಹುದು. ಉಳಿದ ಗುಣಗಳು ತಿಳಿಯಲು ಇಡೀ ಜೀವನವೇ ಬೇಕಾಗುತ್ತದೆ. ಇರುವಷ್ಟು ದಿವಸ ನಮ್ಮನ್ನು ತಿದ್ದಿಕೊಂಡು ಬೇರೆಯವರ ಜೊತೆ ಹೊಂದಿಕೊಂಡು ಇರುವುದು ಸುಲಭದ ಕೆಲಸ.
– ಡಾ.ಹರ್ಷಾ ಕಾಮತ್