ಕೋಟ, ಮೇ 11: ಕಲಾ ಪ್ರತಿಭೆಗಳ ಜನ್ಮದಾತವಾಗಿರುವ ಸಂಸ್ಥೆ ಯಶಸ್ವೀ ಕಲಾವೃಂದ. ನಿರಂತರ ಸಾಂಸ್ಕೃತಿಕ ತರಗತಿಗಳನ್ನು ನಡೆಸುತ್ತಾ ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ಪಳಗಿಸಿ, ಅವಕಾಶ ನೀಡುತ್ತಾ ಪ್ರತಿಭೆಗಳನ್ನು ಬೆಳೆಸುತ್ತಾ ಸಾಧನೆಗೈಯುತ್ತಿರುವುದು ಶ್ಲಾಘನೀಯ ಕಾರ್ಯ. ಕಲಾ ಪ್ರತಿಭೆಗಳಿಗೆ ನಿರಂತರ ವೇದಿಕೆ ಒದಗುತ್ತಿರಬೇಕು. ಈ ನಿಟ್ಟಿನಲ್ಲಿ ೨೫ನೇ ವರ್ಷಾಚರಣೆಯ ಸಂದರ್ಭ ಸಮಾಜದ ಸನ್ಮಿತ್ರರು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಲಾವಿದ, ಕಲಾ ಪ್ರೋತ್ಸಾಹಕ ಗೋಪಾಲ ಮಯ್ಯ ಹರ್ತಟ್ಟು ಅಭಿಪ್ರಾಯಪಟ್ಟರು. ಹರ್ತಟ್ಟುವಿನಲ್ಲಿ ಅಜ್ಜಯ್ಯ ಹಾಯ್ಗುಳಿ ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದಲ್ಲಿ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ದೇಗುಲ ಅರ್ಚಕ ಬಸವ ಅವರನ್ನು ಗೌರವಿಸಿ ಮಾತನಾಡಿದರು. ರಂಗ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವಲ್ಲಿ ಸಮಾಜದ ಗಣ್ಯರು ಮನಸ್ಸು ಮಾಡಬೇಕು. ಕಲಿಯುವ ಮನಸ್ಸುಗಳಿಗೆ ಅವಕಾಶ, ಪ್ರೋತ್ಸಾಹ ದೊರೆತರೆ ನೂರಾರು ಕಲಾವಿದರು ರಂಗದಲ್ಲಿ ಉಳಿದು ಭವಿಷ್ಯವನ್ನಾಳುವುದರಲ್ಲಿ ಸಂದೇಹವಿಲ್ಲ. ಯಕ್ಷಗಾನವನ್ನು ಶ್ರೀಮಂತಗೊಳಿಸುವಲ್ಲಿ ಪ್ರೇಕ್ಷಕರ ಪಾಲು ದೊಡ್ಡದು ಎಂದು ಗುರು ಲಂಬೋದರ ಹೆಗಡೆ ಹೇಳಿದರು.
ದೇಗುಲದ ಅಧ್ಯಕ್ಷ ವಾಸುದೇವ ಮಯ್ಯ, ಚಂದ್ರ ಹರ್ತಟ್ಟು, ಉಪನ್ಯಾಸಕ ಮೋಹನಚಂದ್ರ ಪಂಜಿಗಾರು, ಉದ್ಯಮಿ ಗೋಪಾಲ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಯಶಸ್ವಿ ಕಲಾವೃಂದದ ಮಕ್ಕಳು ನಿರ್ವಹಿಸಿಕೊಟ್ಟರು.