ಮಂಗಳೂರು, ಮೇ 11: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಆಯೋಜಿಸಿರುವ ಐದನೇ ಆವೃತ್ತಿಯ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮ ಶನಿವಾರ ನಗರದ ಫೀಜಾ ಬೈ ನೆಕ್ಸಸ್ ನಲ್ಲಿ ಆರಂಭಗೊಂಡಿತು. ಓಷನ್ ಪರ್ಲ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ದುರೈ ಅರುಣ್ ಪ್ರಶಾಂತ್ ಸೆಲ್ವಂ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ಸಹಾಯಕ ನಿರ್ದೇಶಕ ರೋಷನ್ ಕೋಲಾರ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ದುರೈ ಅರುಣ್ ಪ್ರಶಾಂತ್ ಸೆಲ್ವಂ, ಚಾಕೋಲೇಟ್ ಎಂದರೆ ಕೇವಲ ಒಂದು ಆಹಾರ ಉತ್ಪನ್ನವಲ್ಲ; ಅದೊಂದು ಭಾವನೆ. ಜೊತೆಗೆ ಜೀವನದ ಒಂದು ಅವಿಭಾಜ್ಯ ಅಂಗ. ಯುವ ಜನತೆ ಜೀವನದಲ್ಲಿ ಮೌಲ್ಯಗಳನ್ನು ಗುರುತಿಸಿಕೊಂಡು ಅವನ್ನು ಅಳವಡಿಸಿಕೊಂಡರೆ ಯಶಸ್ಸು ಅಸಾಧ್ಯವಲ್ಲ. ನಿಟ್ಟೆ ವಿಶ್ವವಿದ್ಯಾಲಯವು ನಗರದ ಯುವ ಬೇಕರ್ ಗಳನ್ನು ಗುರುತಿಸಿ ಉತ್ತೇಜಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ಸಹಾಯಕ ನಿರ್ದೇಶಕ ರೋಷನ್ ಕೋಲಾರ ಮಾತನಾಡಿ, ‘ಚಾಕೋಲೇಟ್ ಒತ್ತಡ ನಿವಾರಿಸುವ ತಿನಿಸಾಗಿ ಬಳಕೆಯಲ್ಲಿದೆ. ಜೀವನಕ್ಕೆ ಚೇತೋಹಾರಿಯಾಗಿದೆ. ಯುವ ಉದ್ಯಮಿಗಳು ಒಂದು ಸ್ಪಷ್ಟ ಗುರಿಯನ್ನು ಗುರುತಿಸಿ ಅಳವಡಿಸಿಕೊಂಡರೆ ಗೆಲುವು ಸರಳ’ ಎಂದು ಕಿವಿಮಾತು ಹೇಳಿದರು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮುಖ್ಯಸ್ಥ ರವಿರಾಜ್ ಕಿಣಿ ಸ್ವಾಗತಿಸಿದರು. ಕಾರ್ಯಕ್ರಮದ ಶೈಕ್ಷಣಿಕ ಆಯೋಜಕಿ ಡಾ.ಅನಿಶಾ ನಿಶಾಂತ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಆಯೋಜಕರಾದ ಮಾಳವಿಕಾ ನಾಯರ್ ಮತ್ತು ಬ್ರಿಯಾನ್ ಬಾನ್ಸ್ ಭಾಗವಹಿಸಿದ್ದರು. ವಿದ್ಯಾರ್ಥಿನಿ ಅಲ್ಕಾ ಸೀಕ್ವೇರಾ ಕಾರ್ಯಕ್ರಮ ನಿರೂಪಿಸಿದರು.