ಉಡುಪಿ, ಏ.29: ಬಜೆ ಅಣೆಕಟ್ಟು ಪ್ರದೇಶಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ನೀರಿನ ಲಭ್ಯತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವ್ಯವಸ್ಥಿತ ರೀತಿಯಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪ್ರಸ್ತುತ ನೀರಿನ ಲಭ್ಯತೆಯಂತೆ ಈ ವಾರ ಪೂರ್ತಿ ನಿರಂತರ ನೀರು ಪೂರೈಕೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಮುಂದಿನ ವಾರದ ಲಭ್ಯತೆ ಪರಿಗಣಿಸಿ ರೇಷನಿಂಗ್ ವ್ಯವಸ್ಥೆಯ ಬಗ್ಗೆ ನಿರ್ಧರಿಸುವಂತೆ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಬಾವಿ ಹಾಗೂ ಕೊಳವೆ ಬಾವಿ ಮುಂತಾದ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಕೆ ಹಾಗೂ ಈಗಾಗಲೇ ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪಡೆದ ಗುತ್ತಿಗೆದಾರರ ಮೂಲಕ ಅವಶ್ಯಕ ಪ್ರದೇಶಗಳಿಗೆ ನೀರು ಒದಗಿಸಲು ತಿಳಿಸಿದರು. ನಾಳೆ ವಾರಾಹಿ ಕುಡಿಯುವ ನೀರಿನ ಯೋಜನೆಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ವಾರಾಹಿ ನೀರು ಸರಬರಾಜು ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು. ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಸುಂದರ ಕಲ್ಮಾಡಿ, ನಗರಸಭೆ ಎಇಇ ಯಶವಂತ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.