ನವದೆಹಲಿ, ಏ.26: ಚುನಾವಣೆ ವೇಳೆ ವಿವಿಪ್ಯಾಟ್ ಸ್ಲಿಪ್‌ಗಳ ಶೇ. 100 ರಷ್ಟು ಪರಿಶೀಲನೆ ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿವಿಪ್ಯಾಟ್ ವಿಧಾನದ ಮೂಲಕ ರಚಿಸಲಾದ ಕಾಗದದ ಚೀಟಿಗಳೊಂದಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾವಣೆಯಾದ ಮತಗಳನ್ನು 100% ರಷ್ಟು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದೇ ವೇಳೆ ಮತ್ತೊಮ್ಮೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮರಳುವಂತೆ ಅರ್ಜಿದಾರರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸರ್ವಾನುಮತದ ತೀರ್ಪು ನೀಡಿದೆ. ಇದೇ ಸಂದರ್ಭದಲ್ಲಿ ಎರಡು ನಿರ್ದೇಶನಗಳನ್ನು ನೀಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂಕೇತ ಲೋಡಿಂಗ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಸಿಂಬಲ್ ಲೋಡಿಂಗ್ ಯೂನಿಟ್ (ಎಸ್‌ಎಲ್‌ಯು) ಅನ್ನು ಸೀಲ್ ಮಾಡಬೇಕು ಮತ್ತು ಅವುಗಳನ್ನು ಕನಿಷ್ಠ 45 ದಿನಗಳ ಅವಧಿಯವರೆಗೆ ಸಂಗ್ರಹಿಸಬೇಕು.
ಸುಪ್ರೀಂ ಕೋರ್ಟ್ ಹೊರಡಿಸಿದ ಎರಡನೇ ನಿರ್ದೇಶನದ ಪ್ರಕಾರ ಅಭ್ಯರ್ಥಿಗಳು ಇವಿಎಂಗಳ ಮೈಕ್ರೋಕಂಟ್ರೋಲರ್ ಪ್ರೋಗ್ರಾಂ ಅನ್ನು ಫಲಿತಾಂಶಗಳ ಘೋಷಣೆಯ ನಂತರ ಎಂಜಿನಿಯರ್‌ಗಳ ತಂಡದಿಂದ ಪರಿಶೀಲಿಸಲು ಅವಕಾಶವಿರುತ್ತದೆ, ಅಂತಹ ವಿನಂತಿಯನ್ನು ಅಭ್ಯರ್ಥಿಯು ಫಲಿತಾಂಶ ಘೋಷಣೆಯಾಗಿ ಏಳು ದಿನಗಳಲ್ಲಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿದೆ.