ಉಡುಪಿ, ಏ.22: ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಬೃಹತ್ ಜಾಥಾಗೆ ಸೋಮವಾರ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ಹಾಗೂ ಮೇ 7 ರಂದು ಜಿಲ್ಲೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ಮತದಾರರು ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಲು ಅನುಕೂಲವಾಗುವಂತೆ ಬಿ.ಎಲ್.ಓ ಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಮತದಾರರ ಹೆಸರು, ಕ್ರಮಸಂಖ್ಯೆಯನ್ನೊಳಗೊಂಡ ವೋಟರ್ ಸ್ಲಿಪ್ ಗಳನ್ನು ಹಾಗೂ ಗೈಡ್‌ಗಳನ್ನು ಮನೆ ಮನೆಗೆ ವಿತರಿಸುತ್ತಿದ್ದಾರೆ. ನೀವು ಮತದಾನ ಮಾಡಿ, ನಿಮ್ಮವರನ್ನು ಮತ ಚಲಾಯಿಸಲು ಪ್ರೇರಣೆ ಮಾಡಿ ಎಂದರು. ಜಾಥಾವು ಅಜ್ಜರಕಾಡಿನ ಮೈದಾನದಲ್ಲಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಪ್ರತೀಕ್ ಬಾಯಲ್ ಮಾತನಾಡಿ, ಮತದಾನ ಕೇಂದ್ರಗಳಲ್ಲಿ ಮತದಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮತದಾನ ದಿನ ಬೇಕಾಗುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಹಿರಿಯರು ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಬೇಕು ಎಂದರು. ಪ್ರತಿಯೊಬ್ಬ ಯುವಕರು ಚುನಾವಣೆ ಹಬ್ಬದಲ್ಲಿ ತಪ್ಪದೇ ಭಾಗವಹಿಸಿ, ಜೊತೆಗೆ ಮತದಾನ ಮಾಡಬೇಕು ಹಾಗೂ ಇದರ ಮಹತ್ವವನ್ನು ತಮ್ಮ ಸುತ್ತಮುತ್ತಲಿನ ಜನರಿಗೆ ತಿಳಿಸಿ, ಅವರೂ ಸಹ ಮತದಾನ ಮಾಡುವಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಜಾಥಾದಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಆಶಾ-ಕಾರ್ಯಕರ್ತೆಯರು, ಕಲಾತಂಡಗಳು, ವೇಷಧಾರಿಗಳು, ಚಂಡೆ-ವಾದ್ಯದವರು, ಬ್ಯಾಂಡ್‌ಸೆಟ್‌ನವರು, ನಗರಸಭಾ ಪೌರ ಕಾರ್ಮಿಕರು ಸೇರಿದಂತೆ ಮತ್ತಿತರರು ಹಾಗೂ ಗ್ರಾಮ ಪಂಚಾಯತ್‌ಗಳ ವಿವಿಧ ಪಿ.ಡಿ.ಓ ಗಳು ಅನೇಕ ವೇಷಭೂಷಣಗಳನ್ನು ಧರಿಸಿ ಭಾಗವಹಿದ್ದು ವಿಶೇ಼ಷವಾಗಿತ್ತು. ಮೆರವಣಿಗೆ ಉದ್ದಕ್ಕೂ ‘ನಿಮ್ಮ ಮತ-ನಿಮ್ಮ ಭವಿಷ್ಯ’, ‘ಓಟ್ ಮಾಡಿದವನೇ ಹೀರೋ’, ‘ಜನಸಾಮಾನ್ಯರ ಶಕ್ತಿ ಮತ ಚಲಾವಣೆಯಲ್ಲಿ’, ‘ಮತದಾನ ಮಾಡಿದವನೇ ಶೂರ’, ‘ಪ್ರಜಾಪ್ರಭುತ್ವ ನಮ್ಮಿಂದ-ಮತದಾನ ಹೆಮ್ಮೆಯಿಂದ’, ಎನ್ನುವ ಮತದಾನ ಜಾಗೃತಿ ಮೂಡಿಸುವ ಮಾಹಿತಿ ಫಲಕಗಳು, ಸಾರ್ವಜನಿಕರ ಗಮನ ಸೆಳೆದರೆ ಮೆರವಣಿಗೆಯ ಉದ್ದಕ್ಕೂ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷನೆಗಳನ್ನು ಕೂಗಿದರು. ಜಾಥಾದಲ್ಲಿ ಎಎಸ್‌ಪಿ ಸಿದ್ಧಲಿಂಗಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ರಾಜ್ಯ ಮಟ್ಟದ ಚುನಾವಣಾ ತರಬೇತಿದಾರ ಅಶೋಕ್ ಕಾಮತ್, ಡಿಡಿಪಿಐ ಗಣಪತಿ, ಪೌರಾಯುಕ್ತ ರಾಯಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.