ಮಂಗಳೂರು, ಏ.22: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನ ‘ವಿಕೆಟ್ಸ್ ಫಾರ್ ವೆಲ್‌ಫೇರ್’ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಏಪ್ರಿಲ್ 20 ಹಾಗೂ 21 ರಂದು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಕ್ಷೇಮ ಗ್ರೌಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ಆಯೋಜಿಸಿದ್ದರು. ಈ ಪಂದ್ಯಾವಳಿಯು ಎಚ್‌ಐವಿ ಸೋಂಕಿತ ಮಕ್ಕಳಿಗೆ ನೆರವು ಒದಗಿಸುತ್ತಿರುವ ಸ್ನೇಹಸದನ ಸೇಂಟ್ ಕ್ಯಾಮಿಲ್ಲಾಸ್ ಕೇರ್ ಹೋಮ್, ಗುರುಪುರ ಎಂಬ ಸಂಸ್ಥೆ ನೆರವಿಗಾಗಿ ಆಯೋಜಿಸಲಾಗಿತ್ತು. ನಿಟ್ಟೆ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಐಎಸ್‌ಆರ್) ಹಾಗೂ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯ (ಸಿಆರ್‌ಎಲ್) ಉಪಾಧ್ಯಕ್ಷ ಪ್ರೊ. ಡಾ. ಸತೀಶ ಕುಮಾರ ಭಂಡಾರಿ ಮುಖ್ಯ ಅತಿಥಿಯಾಗಿ ಮತ್ತು ನಗರದ ಸ್ನೇಹಸದನ ಸಂಸ್ಥೆಯ ನಿರ್ದೇಶಕ ಸಿಬಿ ಕೈತರನ್ ಗೌರವ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದರು. ಕೆ ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆಯಿತು, ಎಬಿ ಶೆಟ್ಟಿ ಸ್ಮರಣಾರ್ಥ ದಂತ ವಿಜ್ಞಾನ ಕಾಲೇಜಿನ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಕೆ.ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ಸೋಫಿ ಸರಣಿಶ್ರೇಷ್ಠರಾಗಿ, ಎ ಬಿ ಶೆಟ್ಟಿ ಸ್ಮರಣಾರ್ಥ ದಂತ ವಿಜ್ಞಾನ ಕಾಲೇಜಿನ ಡಾ. ಅಂಶುಮಾನ್ ಶೆಟ್ಟಿ ಉತ್ತಮ ದಾಂಡಿಗ, ಅದೇ ಕಾಲೇಜಿನ ಡಾ. ಮರ‍್ತಜಾ ಉತ್ತಮ ಎಸೆತಗಾರರಾಗಿ ಹೊರಹೊಮ್ಮಿದರು.
ಸಮಾರೋಪ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವ್ಯವಹಾರಗಳು ವಿಭಾಗದ ಸಹ ನಿರ್ದೇಶಕ ಕರ್ನಲ್ ಬಿ.ಎಸ್. ಘಿವಾರಿ ಗೌರವ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಕ್ರೀಡಾ ಮನೋಭಾವವನ್ನು ಪ್ರಶಂಶಿಸಿದರು ಹಾಗು ಮುಂದಿನ ವರ್ಷದ ಪಂದ್ಯಾವಳಿಯಲ್ಲಿ ಹೆಣ್ಣುಮಕ್ಕಳು ಮೈದಾನದಲ್ಲಿ ಆಟವಾಡುವುದನ್ನು ನೋಡಲು ಇಚ್ಛಿಸುತ್ತಾರೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿಗಳನ್ನು ನುಡಿದರು. ಕ್ರಿಕೆಟ್ ತರಬೇತುದಾರ ಸ್ಯಾಮ್ಯುಯೆಲ್ ಜಯರಾಜ್ ಮುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಅನುಭವದ ಮಾತುಗಳನ್ನಾಡಿ, ಕೆ ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ಹಸಿರಾದ ಕ್ಷೇಮ ಮೈದಾನವನ್ನು ನೋಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಜೊತೆಗೆ ಸ್ಪರ್ಧಿಗಳಿಗೆ ಅಭಿನಂದಿಸಿ, ಉತ್ತಮ ಸಲಹೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನ ಮುಖ್ಯಸ್ಥ ಪ್ರೊ. ರವಿರಾಜ್ ಕಿಣಿ, ವಿಕೆಟ್ಸ್ ಫಾರ್ ವೆಲ್‌ಫೇರ್ ನ ಬೋಧಕ ವರ್ಗದ ಸಂಯೋಜಕರಾದ ಅಂಜಲಿ ರೈ, ಪಂದ್ಯಾವಳಿಯ ವಿದ್ಯಾರ್ಥಿ ಸಂಯೋಜಕರಾದ ಅರ್ಫಾನ್ ಅಹ್ಮದ್ ಮತ್ತು ಶಾಂತಿ ನಿಕಿತಾ ಬಿಜು ಹಾಗೂ ವಿಧ್ಯಾರ್ಥಿ ಕ್ರೀಡಾ ಸಂಯೋಜಕ ಜಾನ್ಸನ್ ಡಿಸೋಜ ಅವರು ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಮುಖ್ಯ ಪಾತ್ರವನ್ನು ವಹಿಸಿದರು.