ಕೋಟ, ಏ.18: ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಲಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಕೋಟದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ, ಕೋಟ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಬೇಸಿಗೆ ಶಿಬಿರದ ಚಿತ್ತಾರ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಜೀವನ ಹೊರತುಪಡಿಸಿ ಇನ್ನಿತರ ಚಟುವಟಿಕೆಗಳಿಗೆ ಈ ಶಿಬಿರಗಳು ಸಹಕಾರಿಯಾಗಲಿದೆ, ಸಂಘಸಂಸ್ಥೆಗಳು ಇಂಥಹ ಮಾದರಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಶಿಬಿರಗಳು ಸಮಾಜಕ್ಕೆ ಪೂರಕವಾಗಿ ಭವ್ಯ ಭವಿಷ್ಯ ಬರೆಯುವ ಮುನ್ನುಡಿಯಾಗಲಿ ಎಂದರು.
ಸುಮಾರು ೪ ವರ್ಷದಿಂದ ೭ ವರ್ಷದ ಒಳಗಿನ ಪುಟಾಣಿಗಳಗೆ ಶಿಬಿರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗುರುವಾರ ಆರಂಭಗೊಂಡ ಶಿಬಿರಕ್ಕೆ ಮೂವತ್ತಕ್ಕೂ ಅಧಿಕ ಮಕ್ಕಳು ಭಾಗಿಯಾದರು. ಸಂಪನ್ಮೂಲ ವ್ಯಕ್ತಿಯಾಗಿ ಕೋಟತಟ್ಟು ಜಯಲಕ್ಷ್ಮಿ ಟೀಚರ್, ಕುಮಾರ್ , ರೋಹಿತ್ ಬೈಕಾಡಿ ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕೋಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಇಂಡಿಕಾ ಕಲಾ ಬಳಗದ ಸಂತೋಷ್ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಸ್ವಾಗತಿಸಿ, ಪಂಚವರ್ಣದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಪ್ರೇಮಾ ಆಚಾರ್ ವಂದಿಸಿದರು.