ಉಡುಪಿ, ಏ.12: ದೇಶದ ಆಂತರಿಕ ಭದ್ರತೆ ಹಾಗೂ ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಗೃಹರಕ್ಷಕರನ್ನು ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಚುನಾವಣೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಹಾಗೂ ಜಿಲ್ಲಾಡಳಿತವು ಕರ್ತವ್ಯಕ್ಕೆ ನಿಯೋಜಿಸುತ್ತಿದ್ದು, ಇಂತಹ ತುರ್ತು ಸಂದರ್ಭಗಳಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಸಮಾದೇಷ್ಟರಾದ ಎಸ್.ಟಿ. ಸಿದ್ದಲಿಂಗಪ್ಪ ಹೇಳಿದರು. ಅವರು ನಗರದ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ, ಜಿಲ್ಲಾ ಗೃಹರಕ್ಷಕದಳದಲ್ಲಿ ನೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಧರಿಸುವ ಸಮವಸ್ತ್ರಗಳಿಗೆ ಸಮಾಜದಲ್ಲಿ ಅತ್ಯಂತ ಗೌರವವಿದೆ. ಸಮವಸ್ತ್ರಧಾರಿಗಳು ಅದನ್ನು ಪ್ರೀತಿಸಿ ಗೌರವಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿ, ಯಾವುದೇ ಕೆಲಸದಲ್ಲಿ ಪರಿಪಕ್ವತೆ ಹೊಂದಬೇಕಾದರೆ ಸರಿಯಾದ ತರಬೇತಿ ಅಗತ್ಯ ಇದೆ. ನೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರುಗಳೀಗೆ ಅನುಭವಿ ತರಬೇತುದಾರರಿಂದ 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ತರಬೇತು ಅಧಿಕಾರಿ ಚಂದ್ರಕಾಂತ್, ಕಚೇರಿ ಅಧೀಕ್ಷಕ ರತ್ನಾಕರ್, ಘಟಕಾಧಿಕಾರಿಗಳಾದ ಕುಮಾರ್, ಸ್ಟೀವನ್ ಪ್ರಕಾಶ್, ನವೀನ್, ರಾಘವೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತುರ್ತು ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯ: ಎಎಸ್‌ಪಿ ಸಿದ್ಧಲಿಂಗಪ್ಪ
ತುರ್ತು ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯ: ಎಎಸ್‌ಪಿ ಸಿದ್ಧಲಿಂಗಪ್ಪ
Date: